ಬಳ್ಳಾರಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆರೋಪಕ್ಕೆ ಪ್ರತಿ ಸವಾಲು ಹಾಕಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕೇಂದ್ರ ಸರ್ಕಾರ ಅವರ ಕೈಯಲ್ಲಿದೆ. ನಾಳೆಯಿಂದಲೇ ಮಾಧ್ಯಮಗಳ ಸಮ್ಮುಖದಲ್ಲಿ ಸಮೀಕ್ಷೆ ನಡೆಸಲಿ. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮಾಲೀಕತ್ವದ ಆಂಧ್ರ ಪ್ರದೇಶದ ಓಬಳಾಪುರಂ ಗಣಿಯು ರಾಜ್ಯದ ಗಡಿ ಒತ್ತುವರಿ ಮಾಡಿದೆ ಎಂಬ ಆರೋಪ ನಿರಾಧಾರ. ಈ ಬಗ್ಗೆ ಯಾವಾಗ ಬೇಕಾದರೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಎರಡು ರಾಜ್ಯಗಳಿಗೆ ಸಂಬಂದಿಸಿದ ವಿಚಾರವಾದ್ದರಿಂದ ಕೇಂದ್ರವೇ ಸಮೀಕ್ಷೆ ನಡೆಸಬೇಕು. ಹೀಗಾಗಿ ವಿಳಂಬವಾಗಿದ್ದರೆ, ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ರೆಡ್ಡಿ ಸಹೋದರರ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣವನ್ನು ಹಿಂತೆಗೆಯುವಂತೆ ನಾವು ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿಲ್ಲ ಎಂದು ತಿಳಿಸಿದ್ದಾರೆ.
|