ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಒಂದೆಡೆ ರೈತರು, ಜನಸಾಮಾನ್ಯರು ಕಂಗಾಲಾಗಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗುರುವಾರ ಉಡುಪಿಯ ಶ್ರೀ ಅನಂತೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ಬೆಳಿಗ್ಗೆ ಉಡುಪಿಗೆ ಆಗಮಿಸಿದ್ದ ಡಿಕೆಶಿ, ಶ್ರೀಕೃಷ್ಣ ದೇವಾಲಯದ ಮೂಲಸ್ಥಾನವಾಗಿರುವ ಅನಂತೇಶ್ವರ ದೇವರ ಮೊರೆ ಹೋಗಿರುವ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು 101 ಎಳನೀರು ಅಭಿಷೇಕದ ಪೂಜೆ ಸಲ್ಲಿಸಿದರು.
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ ಜಲಾಶಯಗಳು ಒಣಗತೊಡಗಿವೆ, ಇದರಿಂದಾಗಿ ವಿದ್ಯುತ್ ಸಮಸ್ಯೆ ಎದುರಿಸಬೇಕಾಗಿದೆ. ಅಲ್ಲದೇ ರೈತರು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಬೇಕಾಗಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ವರುಣನ ಕೃಪೆಯಾಗಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಿರುವುದಾಗಿ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ವರುಣನ ಅವಕೃಪೆಗೆ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳವಳ ವ್ಯಕ್ತಪಡಿಸಿ, ಭಗವಂತ ನಮ್ಮ ಕೈ ಬಿಡಲ್ಲ. ಪೂಜೆ-ಪುನಸ್ಕಾರ ಮೊರೆ ಹೋಗುವುದಾಗಿ ಹೇಳಿದ್ದರು. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಂದಿನ ದಿನ ಉತ್ತಮ ಮಳೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. |