ರಾಜ್ಯದಲ್ಲಿ ಇನ್ನೊಂದು ವರ್ಷ ಮಳೆಯಾಗದಿದ್ದರೂ, ಬೆಂಗಳೂರಿಗರಿಗೆ ಮಾತ್ರ ನಿರಾಳವಾಗಿರಬಹುದಂತೆ! ಕೆಆರ್ಎಸ್ ಜಲಾಶಯ ಬರಿದಾದರೂ ನಗರದಲ್ಲಿ ನಿರಾತಂಕವಾಗಿ ಕುಡಿಯುವ ನೀರು ಪೂರೈಕೆಯಾಗಲಿದೆ ಎನ್ನುತ್ತಾರೆ ಜಲಮಂಡಳಿಯ ಅಧಿಕಾರಿಗಳು.
ಕೆಆರ್ಎಸ್ ಜಲಾಶಯದಲ್ಲಿ ನೀರು ಸಂಗ್ರ ಕುಸಿದಿರುವ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಆದರೆ ಇದು ತಪ್ಪು ಗ್ರಹಿಕೆ. ಕೆಆರ್ಎಸ್ ಜಲಾಶಯ ಕುಸಿದಿರುವುದಕ್ಕೂ ಕುಡಿಯುವ ನೀರು ಪೂರೈಕೆ ಕೊರತೆಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ನಗರಕ್ಕೆ ಕಾವೇರಿ ನೀರನ್ನು ಬೆಂಗಳೂರು ಜಲಮಂಡಳಿ ಪಡೆಯುವುದು ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆ ಸಮೀಪದ ನದಿ ಪಾತ್ರದಿಂದ. ಕಾವೇರಿ ನದಿ ತಮಿಳುನಾಡು ಸೇರುವ ಮುಂಚಿನ ರಾಜ್ಯದ ಕಟ್ಟ ಕಡೆಯ ತಾಣವಾದ ಶಿವಾ ಅಣೆಕಟ್ಟೆ ಸಮೀಪ ವರ್ಷಾದ್ಯಂತ ಕಾವೇರಿ ನದಿಯಲ್ಲಿ ನೀರು ಇದ್ದೇ ಇರುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.
ಇದರಿಂದ ಬೆಂಗಳೂರು ಜಲಮಂಡಳಿ ನಿತ್ಯ 860 ದಶಲಕ್ಷ ಲೀಟರ್ ನೀರನ್ನು ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಬೆಂಗಳೂರಿಗೆ ನೀರಿನ ಸಮಸ್ಯೆ ಉದ್ಭವವಾಗಲಾರದು ಎಂಬುದು ಅವರ ದೃಢವಿಶ್ವಾಸ. |