ಒಲವೇ ಜೀವನ ಲೆಕ್ಕಚಾರ ಕೊನೆಗೂ ತೆರೆಗೆ ಬರಲು ಸಿದ್ಧವಾಗಿದೆ. ನಿರ್ಮಾಪಕ ಕೆ. ಮಂಜು ಈ ಚಿತ್ರವನ್ನು ಪ್ರಾರಂಭ ಮಾಡಿ ಆಗಲೇ ಎರಡು ವರ್ಷವಾಗಿದೆ. ಆದರೆ ಇದುವರೆಗೆ ಬಿಡುಗಡೆ ಭಾಗ್ಯ ಕಂಡಿರಲಿಲ್ಲ.
ಅದಕ್ಕೆ ಕಾರಣ ಇಲ್ಲದಿಲ್ಲ. ಕೆ. ಮಂಜು ಒಟ್ಟೊಟ್ಟಿಗೆ ಎರಡು ಮೂರು ಸಿನಿಮಾಗಳನ್ನು ನಿರ್ಮಿಸುತ್ತಾರೆ. ಆದರೆ ಬಿಡುಗಡೆ ಯಾವಾಗ ಮಾಡಬೇಕೆಂಬುದು ಅವರಿಗೆ ಗೊತ್ತಿರುವುದಿಲ್ಲ. ಅದೇ ರೀತಿ ಈ ಚಿತ್ರಕ್ಕೆ ಆಗಿದೆಯಷ್ಟೆ. ಆದರೆ ಮುಂದಿನ ವಾರ ತೆರೆ ಕಾಣಲಿದೆ ಎಂದು ಅವರೇ ಸ್ವತಃ ಹೇಳಿದ್ದಾರೆ.
ಚಿತ್ರದ ಬಗ್ಗೆ ಎರಡು ಮಾತು ಹೇಳುವಂತಿಲ್ಲ. ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದಾರೆ ಎಂದ ಮೇಲೆ ಅಲ್ಲಿ ಕತೆಯ ಜೊತೆಗೆ ಅರ್ಥ ಇರುತ್ತದೆ. ಫ್ಯಾಮಿಲಿ ಕೂತು ನೋಡಬಹುದಾದ ಚಿತ್ರವೇ ಆಗಿರುತ್ತದೆ. ತಡವಾದರೂ ಕ್ವಾಲಿಟಿಯಲ್ಲಿ ರಾಜಿ ಮಾಡಿಕೊಳ್ಳದೆ ಸಿನಿಮಾ ಮಾಡಿರುವ ಬಗ್ಗೆ ಹೆಮ್ಮೆಯಿದೆ ಎನ್ನುತ್ತಾರೆ ಕೆ. ಮಂಜು.
ಚಿತ್ರಕ್ಕೆ ನಾಗತಿಹಳ್ಳಿ ಬರೆದಿರುವ ಭೂಮಿ ಗುಂಡಾಗಿದೆ ಎಂಬ ಚಿತ್ರವೇ ಸ್ಫೂರ್ತಿಯಂತೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಮೊಗ್ಗಿನ ಮನಸು ಚಿತ್ರದ ರಾಧಿಕಾ ಪಂಡಿತ್ ಅಭಿನಯಿಸುತ್ತಿದ್ದಾರೆ.