ವಿಧಾನಸಭೆ ಚುನಾವಣೆ ಘೋಷಣೆ
|
|
|
ಬೆಂಗಳೂರು, ಬುಧವಾರ, 2 ಏಪ್ರಿಲ್ 2008( 18:32 IST )
|
|
|
|
|
|
|
|
ಕರ್ನಾಟಕ ವಿಧಾನಸಭಾ ಚುನಾವಣೆಯ ಅಖಾಡ ಸಜ್ಜಾಗಿದ್ದು, ಮೇ ತಿಂಗಳಲ್ಲಿ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರು ಬುಧವಾರ ಘೋಷಿಸಿದ್ದಾರೆ.
ಕರ್ನಾಟಕದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿಸಿದ ಅವರು, ಮೇ 10, 16 ಹಾಗೂ 22ರಂದು ನಡೆಯಲಿರುವುದಾಗಿ ತಿಳಿಸಿದರು.
ಪ್ರಥಮ ಹಂತದ ಚುನಾವಣೆಯಲ್ಲಿ 89 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ 66 ಹಾಗೂ ಮೂರನೇ ಹಂತದಲ್ಲಿ 69 ಸೀಟುಗಳಿಗೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ವಿವರಿಸಿದರು.
ಮೇ 25 ರಂದು ಮತ ಎಣಿಕೆ ನಡೆಯಲಿದೆ ಎಂದು ಗೋಪಾಲಸ್ವಾಮಿ ಅಧಿಕೃತವಾಗಿ ಇಂದು ಘೋಷಿಸುವ ಮೂಲಕ, ರಾಜ್ಯ ರಾಜಕೀಯದ ಚುನಾವಣೆಗೆ ಅಧಿಕೃತ ಅಂಕಿತ ಬಿದ್ದಂತಾಗಿದೆ.
ಆದರೆ ಚುನಾವಣಾ ಆಯೋಗ ತರಾತುರಿಯಲ್ಲಿ ಚುನಾವಣಾ ಆಯೋಗ ಚುನಾವಣೆಯನ್ನು ನಡೆಸುವ ಮೂಲಕ ಅನ್ಯಾಯವಾಗಲಿದ್ದು, ರಾಜ್ಯದಲ್ಲಿ ಸುಮಾರು 33ಲಕ್ಷ ನಕಲಿ ಮತದಾರರಿದ್ದು, ನಕಲಿ ಮತದಾರರ ಹೆಸರನ್ನು ಕೈಬಿಟ್ಟ ಬಳಿಕವಷ್ಟೇ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚುನಾವಣೆಗಳನ್ನು ಆದಷ್ಟು ಬೇಗ ನಡೆಸಬೇಕೆಂದು ಈ ಹಿಂದೆಯೇ ನಾವು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಮುಂದೆ ಅಹವಾಲು ಸಲ್ಲಿಸಿದ್ದೆವು. ಅದಕ್ಕೀಗ ಜಯ ದೊರೆತಂತಾಗಿದೆ. ಇದು ನಮ್ಮ ಸಂವಿಧಾನಾತ್ಮಕ ಗೆಲುವಾಗಿರುವಂತೆಯೇ ಚುನಾವಣೆಯನ್ನು ಮುಂದಕ್ಕೆ ಹಾಕಿಸಲು ಕುತಂತ್ರ ಮಾಡಿದ್ದ ಕಾಂಗ್ರೆಸ್‌ಗೆ ಮುಖಭಂಗವಾದಂತಾಗಿದೆ ಎಂದು ನುಡಿದರು.
ಈಗಿನದು ಬಿಜೆಪಿಗೆ ಮೊದಲ ಗೆಲುವು; ಚುನಾವಣೆಯ ನಂತರ ಬಹುಮತದೊಂದಿಗಿನ ಸ್ವಂತಬಲದ ಸರ್ಕಾರ ರಚಿಸುವುದು ಎರಡನೇ ಗೆಲುವಾಗಲಿದೆ ಎಂದು ಈ ಸಂದರ್ಭದಲ್ಲಿ ಸದಾನಂದಗೌಡ ಭವಿಷ್ಯ ನುಡಿದರು.
ಆಯೋಗದ ಪ್ರಕಟಣೆಯ ಕುರಿತು ಹರ್ಷ ವ್ಯಕ್ತಪಡಿಸಿದ ಜೆಡಿಎಸ್ ವಕ್ತಾರ ವೈಎಸ್ ದತ್ತಾರವರು, ಮೊದಲಿಗೆ ಈ ಕುರಿತು ನಾವು ಆಯೋಗಕ್ಕೆ ಅಭಿನಂದನೆಯನ್ನು ತಿಳಿಸುತ್ತೇವೆ. ನಾವಂತೂ ಚುನಾವಣೆಗೆ ಸಿದ್ಧರಾಗಿದ್ದೇವೆ. ಪ್ರಾದೇಶಿಕ ಪಕ್ಷವಾಗಿದ್ದರೂ ಭದ್ರ ನೆಲೆಗಟ್ಟನ್ನು ಹೊಂದಿರುವ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ. ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ನಿರಾಶೆಯಾಗಲಿದೆ ಎಂದು ನುಡಿದರು.
|
|
|
|