ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ದಾಳಿಗೊಂದು ತಿಂಗಳು: ಎಚ್ಚರಿಕೆ ನೀಡುತ್ತಲೇ ಇದೆ ಭಾರತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿಗೊಂದು ತಿಂಗಳು: ಎಚ್ಚರಿಕೆ ನೀಡುತ್ತಲೇ ಇದೆ ಭಾರತ
PTI
ದೇಶದ ವಾಣಿಜ್ಯ ರಾಜಧಾನಿ ಮೇಲೆ ಪಾಕಿಸ್ತಾನಿ ಉಗ್ರಗಾಮಿಗಳು ನವೆಂಬರ್ 26ರಂದು ಗ್ರೆನೇಡುಗಳು, ಸ್ವಯಂಚಾಲಿತ ಗನ್ನುಗಳೊಂದಿಗೆ ದಾಳಿ ನಡೆಸಿದ್ದರು. ಮೂರು ದಿನಗಳ ಕಾಲ ನಡೆದ ಕಾಡಾಕಾಡಿ ಹೋರಾಟದಲ್ಲಿ 173 ಜೀವಗಳು ಬಲಿಯಾಗಿದ್ದವು ಮತ್ತು ಕನಿಷ್ಠ 308 ಮಂದಿ ಗಾಯಗೊಂಡಿದ್ದರು. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಹೆಚ್ಚುವರಿ ಪೊಲೀಸ್ ಕಮಿಶನರ್ ಅಶೋಕ್ ಕಾಮ್ಟೆ, ಇನ್‌ಸ್ಪೆಕ್ಟರ್ ವಿಜಯ ಸಾಲಸ್ಕರ್, ಎನ್ಎಸ್‌ಜಿ ಕಮಾಂಡೋ ಸಂದೀಪ್ ಉಣ್ಣಿಕೃಷ್ಣನ್ ಸಹಿತ 18 ಮಂದಿ ಪೊಲೀಸರು ಹಾಗೂ ಭದ್ರತಾ ಪಡೆ ಯೋಧರು ವೀರಮರಣವನ್ನಪ್ಪಿದರು. 10 ಮಂದಿ ಉಗ್ರಗಾಮಿಗಳಲ್ಲಿ 9 ಮಂದಿ ಸಾವನ್ನಪ್ಪಿದರೆ, ಒಬ್ಬ ಜೀವಂತ ಅಜ್ಮಲ್ ಅಮೀರ್ ಕಸಬ್ ಎಂಬಾತ ಸೆರೆಸಿಕ್ಕಿದ್ದು, ಪಾಕಿಸ್ತಾನದ ಒಳಸಂಚುಗಳನ್ನೆಲ್ಲಾ ಬಯಲುಗೊಳಿಸುತ್ತಿದ್ದಾನೆ.

ಒಂದು ತಿಂಗಳ ಹಿಂದೆ ನಡೆದ ಈ ಆಘಾತದಿಂದ ಭಾರತವಿನ್ನೂ ಚೇತರಿಸಿಕೊಂಡಿಲ್ಲ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಯೋತ್ಪಾದನೆ ಕುರಿತ ಧೂಳೆದ್ದಿದೆ. ಭಾರತ-ಪಾಕಿಸ್ತಾನ ನಡುವೆ ಯುದ್ಧೋನ್ಮಾದ ಏರ್ಪಟ್ಟಿದೆ.

ಭಾರತವು ಉಗ್ರಗಾಮಿಗಳ ಅತ್ಯಂತ ಸುಲಭ ಗುರಿ ಎಂಬ ಭಾವನೆ ಬರತೊಡಗಿರುವುದು ಆತಂಕಕಾರಿ ಸಂಗತಿ. ಇದರಿಂದಾಗಿ ಉದ್ಯಮ ಜಗತ್ತು ಕೂಡ ಭಾರತದಲ್ಲಿ ಹೂಡಿಕೆ ಮಾಡುವಾಗ ಮತ್ತಷ್ಟು ಚಿಂತಿಸುವಂತಹ ಪರಿಸ್ಥಿತಿ ಉಂಟಾಗಿದೆ. ಉದ್ಯಮಪತಿಗಳು ಧ್ವನಿಯೆತ್ತುತ್ತಿದ್ದಾರೆ. ಪೊಲೀಸ್ ವ್ಯವಸ್ಥೆ ಬಲಪಡಿಸಬೇಕು ಎಂಬ ಕೂಗೆದ್ದಿದೆ. ಗುಪ್ತಚರ ವೈಫಲ್ಯವಂತೂ ಎಲ್ಲೆಡೆಯಿಂದ ಟೀಕೆಗೆ ಗುರಿಯಾಗಿದೆ.

ಇದರೊಂದಿಗೆ ಕರಾವಳಿ ತಟ ರಕ್ಷಣಾ ಪಡೆ, ಗುಪ್ತ ದಳ, ಭದ್ರತಾ ಪಡೆಗಳ ನಡುವಣ ಹೊಂದಾಣಿಕೆ ಕೊರತೆಯೂ ಮೇಲೆದ್ದು ನಿಂತಿದೆ. ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಬಯಲಾಗಿ, ಜನರು ಜಾಗೃತರಾಗಿ ರಾಜಕಾರಣಿಗಳನ್ನೆಲ್ಲಾ ಮನಬಂದಂತೆ ಟೀಕಿಸಿದ್ದಾರೆ. 59 ಗಂಟೆಗಳ ಕಾಲ ಹೋರಾಡಿ ದೇಶಕ್ಕಾಗಿ, ದೇಶ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಧೀರ ಯೋಧರ ಪಾರ್ಥಿವ ಶರೀರಗಳ ಮೇಲೂ ನಡೆದ ರಾಜಕಾರಣವು ದೇಶವಾಸಿಗಳಲ್ಲಿ ರಾಜಕೀಯದ ಬಗ್ಗೆ ಹೇಸಿಗೆ ಹುಟ್ಟಿಸಿದೆ. ಕಾರ್ಯಾಚರಣೆಯ ಲೈವ್ ಕವರೇಜ್ ಕೂಡ ಸಾಕಷ್ಟು ಧೂಳೆಬ್ಬಿಸಿ, ದೃಶ್ಯ ಮಾಧ್ಯಮಗಳ ಮೇಲೂ ಕಡಿವಾಣ ಹಾಕುವ ಅಗತ್ಯವಿದೆ ಎಂಬಷ್ಟರ ಮಟ್ಟಿಗೆ ಚರ್ಚೆಗಳಾಗಿವೆ.

ಭಯೋತ್ಪಾದನೆಯನ್ನು ಹತ್ತಿಕ್ಕುವ ಯುಪಿಎ ಸರಕಾರದ ಸಾಮರ್ಥ್ಯದ ಬಗ್ಗೆ ಜನತೆಗೆ ನೋವಿದೆ, ಬೇಸರವಿದೆ, ಆಕ್ರೋಶವೂ ಉಂಟಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದನಾ ಶಿಬಿರಗಳನ್ನು ನಿರ್ನಾಮ ಮಾಡಬೇಕು ಎಂದು ಅಮೆರಿಕವು ಒತ್ತಡ ಹಾಕುತ್ತಿರುವುದು ಭಾರತಕ್ಕೆ ಪೂರಕವಾಗಿ, ಆಶಾದಾಯಕವಾಗಿ ಪರಿಣಮಿಸಿದೆ. ಕೊನೆಗೂ ಭಯೋತ್ಪಾದನೆ ವಿರುದ್ಧದ ಕಾನೂನು ಕಠಿಣಗೊಳಿಸಲು ಸರಕಾರ ಮನ ಮಾಡಿದೆ.

ಆದರೆ, ಭಾರತದ ಮಾತಿಗೆ ಪಾಕಿಸ್ತಾನ ಬಗ್ಗುವಂತೆ ತೋರುತ್ತಿಲ್ಲ. ಉಗ್ರಗಾಮಿಗಳು ಪಾಕಿಸ್ತಾನದವರೇ ಎಂಬ ಕುರಿತು ಸಾಕ್ಷ್ಯಾಧಾರಗಳನ್ನು ಕೊಟ್ಟರೂ, ಅವ ನಮ್ಮವನಲ್ಲ ಎಂಬುದೇ ಪಾಕಿಸ್ತಾನದ ಬಿಗಿಪಟ್ಟು. ಸಾಕ್ಷ್ಯ ಕೊಡಿ ಎಂಬ ತಗಾದೆ ಬೇರೆ. ಇದರ ನಡುವೆ, ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಅದರ ಹೇಳಿಕೆಗಳು. ಕೊನೆಗೆ, ನಮಗೆ ಯುದ್ಧ ಇಷ್ಟ ಇಲ್ಲ, ಶಾಂತಿಯೇ ಆದ್ಯತೆ, ಆದರೆ ದಾಳಿ ಮಾಡಿದರೆ ಬಿಡುವುದಿಲ್ಲ ಎಂಬ ಪ್ರಚೋದನಕಾರಿ ಹೇಳಿಕೆಗಳು ಕೂಡ ಬರುತ್ತಲೇ ಇವೆ.

ಸರಿಯಾಗಿ ಒಂದು ತಿಂಗಳ ಹಿಂದೆ ಮುಂಬಯಿಯ ಎರಡು ಐಷಾರಾಮಿ ಪಂಚತಾರಾ ಹೋಟೆಲುಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ಆದರೆ ಕೂಗಳತೆ ದೂರದಲ್ಲಿರುವ ರಾಜ್ಯದ ಮಂತ್ರಾಲಯ (ಸಚಿವಾಲಯ)ದಲ್ಲಿ ಇನ್ನು ಕೂಡ ರಾಜಕಾರಣಿಗಳು ಎಚ್ಚೆತ್ತುಕೊಂಡ ಲಕ್ಷಣಗಳು ಕಾಣಿಸುತ್ತಿಲ್ಲ. ಗೇಟಿನಲ್ಲಿರುವ ಬ್ಯಾಗೇಜ್ ತಪಾಸಣಾ ಯಂತ್ರಗಳಲ್ಲಿ ಅರ್ಧದಷ್ಟು ಕೂಡ ಕೆಲಸವೇ ಮಾಡುತ್ತಿಲ್ಲ ಮತ್ತು ರಾಜ್ಯದ ಅಧಿಕಾರ ಕೇಂದ್ರದ ರಕ್ಷಣೆಗೆ ನಿಯೋಜಿಸಲ್ಪಟ್ಟಿರುವ ಪೊಲೀಸರು ತಮಗೆ ಒದಗಿಸಲಾದ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನು ಇನ್ನೂ ತೊಡುತ್ತಿಲ್ಲ. ಇದಕ್ಕೆ ಅದರ "ಯಮಭಾರ" ಕಾರಣ ಎನ್ನುತ್ತಾರೆ ಪೊಲೀಸರು.

ಭಯೋತ್ಪಾದನೆ ದಾಳಿಗೆ ತುತ್ತಾದ ಹೋಟೆಲ್ ತಾಜ್ ಮಹಲ್, ಟ್ರೈಡೆಂಟ್‍‌ಗಳು ಮೂರು ವಾರಗಳ ಬಳಿಕ ಡಿಸೆಂಬರ್ 21ರಂದು ಮರಳಿ ತಮ್ಮ ಹಿಂದಿನ ಆತಿಥ್ಯ ಸೇವೆಗೆ ತೆರೆದುಕೊಂಡಿವೆ. ಮೊದಲು ಉಗ್ರರ ಗುರಿಯಾಗಿದ್ದ ಲಿಯೋಪೋಲ್ಡ್ ಕೆಫೆ, ಎರಡೇ ವಾರಗಳಲ್ಲಿ ಮರಳಿ ತೆರೆದುಕೊಂಡಿತ್ತು.

ತನಿಖೆ ನಿಟ್ಟಿನಲ್ಲಿ, ದಾಳಿಯ ಹಿಂದೆ ಪಾಕಿಸ್ತಾನ ಕೈವಾಡವು ಸಾಬೀತಾಗಿದೆ. ಅತ್ಯಾಧುನಿಕ ಸಂಪರ್ಕ ಸಾಧನಗಳನ್ನು ಬಳಸಿ, ಲಷ್ಕರ್ ಇ ತೋಯ್ಬಾಕ್ಕೆ ಸೇರಿದ 10 ಮಂದಿ ಉಗ್ರಗಾಮಿಗಳು ಕರಾಚಿಯಿಂದ ಭಾರತಕ್ಕೆ, ಗುಜರಾತಿನಲ್ಲಿ ಮೀನುಗಾರಿಕಾ ದೋಣಿ 'ಕುಬೇರ'ವನ್ನು ಅಪಹರಿಸಿ ಮುಂಬಯಿಗೆ ಕಾಲಿಟ್ಟಿದ್ದರು ಎಂಬುದು ಖಚಿತವಾಗಿದೆ. ಉಗ್ರರು ಪಾಕಿಸ್ತಾನೀಯರಿರಬಹುದು ಎಂದು ಒಮ್ಮೆ ಹೇಳಿದ್ದ ಪಾಕಿಸ್ತಾನ, ಇದೀಗ ರಾಗ ಬದಲಿಸಿ ಸಮರಕ್ಕೆ ಸಜ್ಜಾಗುತ್ತಿದೆ.

ಆ ಮೂರು ದುರಂತಮಯ ದಿನಗಳ ನೋವು, ದುಃಖವಿನ್ನೂ ಭಾರತೀಯನ ಮನಃಪಟಲದಿಂದ ಮಾಸಿಲ್ಲ. ಉಭಯ ದೇಶಗಳ ಗಡಿಗಳಲ್ಲಿ ಸೈನಿಕರು ಸರ್ವ ಸನ್ನದ್ಧರಾಗುತ್ತಿದ್ದಾರೆ. ಒಂದು ತಿಂಗಳ ಬಳಿಕವೂ ಭಾರತವು ಮತ್ತೆ ಮತ್ತೆ 'ನಾವು ಸುಮ್ಮನಿರುವುದಿಲ್ಲ' ಎಂದು ಎಚ್ಚರಿಸುತ್ತಲೇ ಇದೆ. ಮುಂಬಯಿ ಜೀವನ ಹಿಂದಿನ ಹಳಿಗೆ ಮರಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರಣಿ ತಿಪ್ಪರಲಾಗ: ಪಾಕಿಸ್ತಾನಕ್ಕೇನಾಗಿದೆ?
ಅಪಾಯ! ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಪ್‌ಡೇಟ್ ಮಾಡಿಕೊಳ್ಳಿ
ಉಗ್ರ ನಿಗ್ರಹ: ಹೊಸ ಕಾನೂನಿನಲ್ಲಿ ಏನೇನಿದೆ?
ಇದೋ ಬಂದಿದೆ 3-ಜಿ ಸೌಲಭ್ಯ: ಏನಿದು?
ಲಷ್ಕರ್ ಸಂಘಟನೆ ಹುಟ್ಟುಹಾಕಿದ್ದು ಯಾರು?
2008ರ ಶ್ರೇಷ್ಠರು ಯಾರು? ವೆಬ್‌ದುನಿಯಾ ಸಮೀಕ್ಷೆ