ಪಾಕಿಸ್ತಾನದ ಪ್ರಕ್ಷುಬ್ಧ ದಕ್ಷಿಣ ವಾಜಿರಿಸ್ತಾನ ಬುಡಕಟ್ಟು ಪ್ರದೇಶದಲ್ಲಿ ಅಮೆರಿಕದ ಡ್ರೋನ್ ವಿಮಾನ ಕ್ಷಿಪಣಿ ದಾಳಿ ನಡೆಸಿದ್ದರಿಂದ ಕೆಲವು ವಿದೇಶಿ ಉಗ್ರರು ಸೇರಿದಂತೆ ಐವರು ಉಗ್ರಗಾಮಿಗಳು ಹತರಾಗಿದ್ದಾರೆ. ಪಾಕಿಸ್ತಾನಿ ತಾಲಿಬಾನ್ ಕಮಾಂಡರ್ ವಾಲಿ ಅಲಿಯಾಸ್ ಮಲಾಂಗ್ ನಾಜಿರ್ ನೆಲೆ ಸೇರಿದಂತೆ ಎರಡು ವಿವಿಧ ಕಡೆಗಳಲ್ಲಿ ಡ್ರೋನ್ ದಾಳಿ ನಡೆಸಲಾಗಿದೆ.
ಗುರಿಯಿಟ್ಟ ಪ್ರದೇಶಗಳನ್ನು ತಾಲಿಬಾನ್ ನಾಯಕ ಮುಲ್ಲಾ ನಜೀರ್ ನಿಯಂತ್ರಿಸುತ್ತಿದ್ದು, ಆಫ್ಘಾನಿಸ್ತಾನದ ಮೇಲೆ ದಾಳಿಗಳಿಗೆ ಅವನ ವಿರುದ್ಧ ಆರೋಪ ಹೊರಿಸಲಾಗಿದೆ. ದಕ್ಷಿಣ ವಾಜಿರಿಸ್ತಾನದ ಮುಖ್ಯಪಟ್ಟಣ ವಾನಾದಿಂದ 15 ಕಿಮೀ ದೂರದ ಶಾ ಅಲಂನಲ್ಲಿರುವ ಮದ್ರಾಸಾ ಮತ್ತು ವಸತಿ ಕಾಂಪೌಂಡ್‍ನೊಳಗೆ ಮೂರು ಕ್ಷಿಪಣಿಗಳು ಅಪ್ಪಳಿಸಿವೆ. ಇನ್ನೊಂದು ಕ್ಷಿಪಣಿ ರಾಗಜಾಯಿ ಉಗ್ರಗಾಮಿ ತರಬೇತಿ ಕೇಂದ್ರಕ್ಕೆ ಬಡಿದಿದೆ.
ಮೃತಪಟ್ಟ ಐವರು ಮಲಾಂಗ್ ನಜೀರ್ ಜತೆ ಸಹಯೋಗ ಹೊಂದಿದ ಉಗ್ರಗಾಮಿಗಳಾಗಿದ್ದಾರೆಂದು ನಿವಾಸಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಸತ್ತವರಲ್ಲಿ ಕೆಲವು ವಿದೇಶಿ ಹೋರಾಟಗಾರರು ಸೇರಿದ್ದಾರೆ.ದಾಳಿಗೆ ಮುನ್ನ ಕೆಲವು ವಿದೇಶಿ ಡ್ರೋನ್ ವಿಮಾನಗಳು ಹಾರಾಡುತ್ತಿದ್ದುದನ್ನು ಕಂಡಿದ್ದಾಗಿ ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಪಾಕಿಸ್ತಾನ ಮಿಲಿಟರಿಯು ದಕ್ಷಿಣ ವಾಜಿರಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿಗೆ ಗನ್‌ಶಿಪ್ ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದೆ. ಸಾವಿರಾರು ಜನರು ಕೆಲವು ದಿನಗಳಿಂದ ಮಿಲಿಟರಿ ಕಾರ್ಯಾಚರಣೆ ಭೀತಿಯಿಂದ ಪಲಾಯನ ಮಾಡಿದ್ದಾರೆ. |