ಕಳೆದ ವರ್ಷ ಇರಾನ್‌ಗೆ ಅಕ್ರಮ ಸರಕು ಸಾಗಣೆ ಮಾಡುತ್ತಿದ್ದ ಉತ್ತರ ಕೊರಿಯ ವಿಮಾನಕ್ಕೆ ಅಮೆರಿಕದ ಮನವಿ ಮೇರೆಗೆ ಭಾರತ ತನ್ನ ವಾಯುಪ್ರದೇಶದಲ್ಲಿ ಹಾರಾಟ ನಿಷೇಧಿಸಿತು ಎಂದು ಅಮೆರಿಕದ ಸಂಸತ್ ಸದಸ್ಯರೊಬ್ಬರು ಗುರುವಾರ ಮಾಹಿತಿ ನೀಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಅಮೆರಿಕದ ಮನವಿಗೆ ಸ್ಪಂದಿಸಿದ ಭಾರತ ಉತ್ತರ ಕೊರಿಯದ ವಿಮಾನಕ್ಕೆ ತನ್ನ ವಾಯುಪ್ರದೇಶದಲ್ಲಿ ಹಾರಾಟ ನಡೆಸದಂತೆ ತಡೆದಿದ್ದರಿಂದ ವಿಮಾನ ಹಿಂತಿರುಗಿತು ಎಂದು ಸಂಸದ ಎಡ್ ರಾಯ್ಸೆ ತಿಳಿಸಿದ್ದಾರೆ.
"ಉತ್ತರ ಕೊರಿಯದ ಅಣು ಮತ್ತು ಕ್ಷಿಪಣಿ ಪರೀಕ್ಷೆಗಳು ಮತ್ತು 6 ರಾಷ್ಟ್ರಗಳ ಮಾತುಕತೆ: ಇಲ್ಲಿಂದ ಮುಂದೆ ಎಲ್ಲಿಗೆ?" ಕುರಿತು ಏಷ್ಯಾ, ಪೆಸಿಫಿಕ್ ಮತ್ತು ಜಾಗತಿಕ ಪರಿಸರ ಉಪಸಮಿತಿ ಮತ್ತು ಭಯೋತ್ಪಾದನೆ, ಪ್ರಸರಣ ನಿಷೇಧ ಮತ್ತು ವ್ಯಾಪಾರ ಉಪಸಮಿತಿಯು ಜಂಟಿ ವಿಚಾರಣೆ ನಡೆಸಿತು.ಮಧ್ಯಪ್ರಾಚ್ಯಕ್ಕೆ ಉತ್ತರಕೊರಿಯದ ಅಣ್ವಸ್ತ್ರ ಪ್ರಸರಣವು ಕಳವಳವನ್ನು ಹೆಚ್ಚಿಸಿದೆ. ಇರಾನ್ ಮತ್ತು ಸಿರಿಯಕ್ಕೆ ಉ.ಕೊರಿಯ ಸಹಕಾರ ನೀಡುತ್ತಿರುವುದಕ್ಕೆ ದಾಖಲೆಗಳಿವೆ ಎಂದು ಅವರು ಹೇಳಿದ್ದಾರೆ. |