ಇಬ್ಬರು ಮಹಿಳೆಯರು ಧರಿಸಿದ್ದ ಉಡುಪು ಅಶ್ಲೀಲವೆಂದು ಪರಿಗಣಿಸಿದ ಸೂಡಾನ್ ಕೋರ್ಟ್ ಗುರುವಾರ ಅವರಿಬ್ಬರಿಗೆ 20 ಛಡಿಯೇಟಿನ ಶಿಕ್ಷೆಯನ್ನು ವಿಧಿಸಿದೆ. ಅಶ್ಲೀಲವೆಂದು ಹೇಳಲಾದ ಪ್ಯಾಂಟ್ ಧರಿಸಿದ್ದಕ್ಕೆ ದಂಡ ತೆರಲು ನಿರಾಕರಿಸಿ ಒಂದು ದಿನ ಜೈಲಿನಲ್ಲಿ ಕಳೆದ ಪತ್ರಕರ್ತೆ ಲುಬ್ನಾ ಅಹ್ಮದ್ ಹುಸೇನ್ ಜತೆ ಇಬ್ಬರು ಮಹಿಳೆಯರನ್ನು ಕಳೆದ ಜುಲೈನಲ್ಲಿ ಖಾರ್ಟೋಂನಲ್ಲಿ ಬಂಧಿಸಲಾಗಿತ್ತು.
ಇಬ್ಬರು ಮಹಿಳೆಯರು ಪ್ಯಾಂಟ್ ಧರಿಸಿದ್ದರು ಮತ್ತು ತಲೆಗೆ ಸ್ಕಾರ್ಫ್ ಧರಿಸಿರಲಿಲ್ಲ. ಆದ್ದರಿಂದ ಅವರಿಬ್ಬರು ತಪ್ಪಿತಸ್ಥರು ಎಂದು ಪರಿಗಣಿಸಿ 20 ಛಡಿಯೇಟಿನ ಶಿಕ್ಷೆ ವಿಧಿಸಲಾಗಿದೆಯೆಂದು ನ್ಯಾಯಾಧೀಶ ಹಸನ್ ಮೊಹಮದ್ ಅಲಿ ತಿಳಿಸಿದ್ದಾರೆ. ಪ್ರತಿಮಹಿಳೆಗೆ 20 ಛಡಿಯೇಟಿನ ಶಿಕ್ಷೆ ಮತ್ತು 100 ಡಾಲರ್ ದಂಡವನ್ನು ವಿಧಿಸಿದ್ದು, ದಂಡ ತೆರಲು ತಪ್ಪಿದರೆ ಒಂದು ತಿಂಗಳು ಜೈಲುವಾಸವೆಂದು ನ್ಯಾಯಾಧೀಶ ಹಸನ್ ಮೊಹಮದ್ ಅಲಿ ತಿಳಿಸಿದ್ದಾರೆ.
ಕಳೆದ ತಿಂಗಳು ಹುಸೇನ್ ಕೋರ್ಟ್ ಅಶ್ಲೀಲವೆಂದು ಪರಿಗಣಿಸಿದ ಪ್ಯಾಂಟು ಧರಿಸಿದ್ದಕ್ಕಾಗಿ ದಂಡ ತೆರಲು ನಿರಾಕರಿಸಿ ಜೈಲಿಗೆ ಹೋಗಿದ್ದರು. ಜೈಲಿನಲ್ಲಿ ಒಂದು ತಿಂಗಳು ಅವರು ಕಳೆಯಬೇಕಿತ್ತು. ಆದರೆ ಮರುದಿನವೇ ಪತ್ರಕರ್ತರ ಸಂಘ ದಂಡ ತೆತ್ತಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ತಾನು ಧರಿಸಿದ್ದ ಸಡಿಲ ಪ್ಯಾಂಟ್ ಅಶ್ಲೀಲವಲ್ಲವೆಂದು ವಾದಿಸಿದ್ದ ಹುಸೇನ್, ಕಾನೂನಿನ ವಿರುದ್ಧ ಸೆಡ್ಡು ಹಾಕಿದ್ದರು.
ಅವರ ಪ್ರಕರಣದಲ್ಲಿ ಛಡಿಯೇಟಿನ ಶಿಕ್ಷೆ ಬದಲಿಗೆ 200 ಡಾಲರ್ ದಂಡವನ್ನು ಕೋರ್ಟ್ ವಿಧಿಸಿತ್ತು. ಆದರೆ ಕಾರ್ಟೋಮ್ ಹೊಟೆಲ್‌ನಲ್ಲಿ ಬಂಧಿತರಾದ 12 ಮಹಿಳೆಯರಲ್ಲಿ 10 ಜನರಿಗೆ ಅಶ್ಲೀಲತೆಗಾಗಿ ಛಡಿಯೇಟಿನ ಶಿಕ್ಷೆಯನ್ನು ವಿಧಿಸಲಾಗಿತ್ತು.