ಪಾಕಿಸ್ತಾನ ಸುಪ್ರೀಂ ಕೋರ್ಟಿನಿಂದ ಮರಣದಂಡನೆ ಶಿಕ್ಷೆಗೀಡಾಗಿರುವ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್‌ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿರುವ ಪಾಕಿಸ್ತಾನಿ ಮಾನವ ಹಕ್ಕುಗಳ ಚಳುವಳಿಗಾರ ಅನ್ಸರ್ ಬರ್ನೆ, ಸಬರ್ಜಿತ್ ಒಳಗೊಂಡಿರುವುದಾಗಿ ಆಪಾದಿಸಲಾಗಿರುವ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೃತರಾದವರ ಸಂಬಂಧಿಗಳಿಂದ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.
ಗೃಹಸಚಿವ ಶಿವರಾಜ್ ಪಾಟೀಲ್ ಹಾಗೂ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರನ್ನು ಭೇಟಿ ಮಾಡಿದ ಬರ್ನೆ, ಕಳೆದ 28 ವರ್ಷಗಳಿಂದ ಪಾಕಿಸ್ತಾನ ಜೈಲಿನಲ್ಲಿ ಬಂಧಿಯಾಗಿರುವ ಇನ್ನೋರ್ವ ಭಾರತೀಯ ಪ್ರಜೆಯ ಬಿಡುಗಡೆಯ ವಿಚಾರವನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
"ತನ್ನನ್ನು ಭೇಟಿಯಾದ ಮಹಿಳೆಯೊಬ್ಬರು, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅವರ ತಂದೆ ಕಳೆದ 28 ವರ್ಷಗಳಿಂದ ಪಾಕಿಸ್ತಾನ ಜೈಲಿನಲ್ಲಿ ಕೊಳೆಯುತ್ತಿರುವ ವಿಚಾರ ತಿಳಿಸಿದ್ದಾರೆ. ಇದು ಸರ್ಬಜಿತ್ ಪ್ರಕರಣಕ್ಕಿಂತಲೂ ಗಂಭೀರವಾದುದು" ಎಂದು ಎರಡು ತಿಂಗಳ ಹಿಂದೆ ಕಾಶ್ಮೀರ ಸಿಂಗ್ ಬಿಡುಗಡೆಗೆ ಪ್ರಯತ್ನಿಸಿದ ಪಾಕಿಸ್ತಾನದ ಮಾಜಿ ಸಚಿವ ನುಡಿದರು.
"ತಾನು ಪಾಕಿಸ್ತಾನಕ್ಕೆ ಮರಳಿದ ಬಳಿಕ, ಸರಬ್ಜಿತ್ ಆಪಾದನೆಗೀಡಾಗಿರುವ 18 ವರ್ಷಗಳ ಹಿಂದಿನ ಬಾಂಬ್ ಸ್ಫೋಟದ 14 ಬಲಿಪಶುಗಳ ಕುಟುಂಬಿಕರಲ್ಲಿ ಸರಬ್ಜಿತ್‌ನನ್ನು ಕ್ಷಮಿಸುವಂತೆ ವಿನಂತಿಸುತ್ತೇನೆ. ಒಂದು ವ್ಯಕ್ತಿಯ ಜೀವವು ಎರಡು ರಾಷ್ಟ್ರಗಳ ಭ್ರಾತೃತ್ವದ ಅಭಿವೃದ್ಧಿಗೆ ಸಹಾಯಕವಾಗುವುದರೆ ಸರಬ್ಜಿತ್‌ನನ್ನು ಕ್ಷಮಿಸಿ" ಎಂದು ತಾನು ಆ ಕುಟುಂಬಗಳನ್ನು ವಿನಂತಿಸುವುದಾಗಿ ಬರ್ನೆ ಹೇಳಿದ್ದಾರೆ.
|