ಆರನೇ ವೇತನ ಆಯೋಗದ ಶಿಫಾರಸುಗಳ ಹಿನ್ನೆಲೆಯಲ್ಲಿ, ಸೇನಾ ಪಡೆಗಳಿಗೆ ಅಧಿಕಾರಿಗಳು ಗುಡ್‌ಬೈ ಹೇಳುತ್ತಿರುವ ವರದಿ ಪ್ರಕಟವಾಗಿರುವಂತೆಯೇ, ಸಶಸ್ತ್ರ ಪಡೆ ಸಿಬ್ಬಂದಿಗೆ ನ್ಯಾಯ ದೊರಕಿಸುವಲ್ಲಿ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಫ್.ಎಚ್.ಮೇಜರ್ ತಿಳಿಸಿದ್ದಾರೆ.
ಎರಡು ದಿನಗಳ ಸ್ಟೇಶನ್ ಕಮಾಂಡರ್‌ಗಳ ಸಮಾವೇಶ ಉದ್ಘಾಟನೆಗೆ ಇಲ್ಲಿಗಾಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಧಿಕಾರಿಗಳ ಮಟ್ಟದಲ್ಲಿ ಸಿಬ್ಬಂದಿ ಕೊರತೆ ಇದೆ, ಇದು ಚಿಂತೆಯ ವಿಷಯ ಎಂಬುದನ್ನು ಒಪ್ಪಿಕೊಂಡರು.
ಎರಡು ವಾರದಲ್ಲಿ 107 ಮಂದಿ ರಾಜೀನಾಮೆ: ಮಾರ್ಚ್ 24ರಂದು ಆರನೇ ವೇತನ ಆಯೋಗವು ತನ್ನ ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಿದ ಬಳಿಕ ಇದುವರೆಗೆ ಸುಮಾರು 107 ಮಂದಿ ಸೇನಾ ಅಧಿಕಾರಿಗಳು ಕೆಲಸ ಬಿಟ್ಟಿದ್ದಾರೆ.
ಲೆಫ್ಟಿನೆಂಟ್ ಕರ್ನಲ್, ಕರ್ನಲ್ ಮಟ್ಟದ ಅಧಿಕಾರಿಗಳು ವಸ್ತುತಃ ದಿನಕ್ಕೊಬ್ಬರಂತೆ ತಮ್ಮ ರಾಜೀನಾಮೆ ಪತ್ರ ಕಳುಹಿಸುತ್ತಿರುವುದು ಸೇನಾ ಮುಖ್ಯಾಲಯಕ್ಕೆ ನುಂಗಲಾರದ ತುತ್ತು. ವೇತನ ಆಯೋಗದ ಶಿಫಾರಸಿನ ಪ್ರಕಾರ, ಕೇವಲ ಶೇ.15 ವೇತನ ಹೆಚ್ಚಳ ದೊರೆಯಲಿದೆ. ಇದರಿಂದ ಅಸಮಾಧಾನಗೊಂಡ ಉನ್ನತ ಅಧಿಕಾರಿಗಳೂ ಕೆಲಸ ಬಿಡಲು ಯೋಚಿಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾನ್ಯ ಸ್ಥಿತಿಯಲ್ಲಿಯೂ, ವಾರಕ್ಕೆ 2ರಿಂದ 4ರಷ್ಟು ಮಂದಿಯ ಅವಧಿಪೂರ್ವ ನಿವೃತ್ತಿ ಪೇಪರುಗಳನ್ನು ಸೇನೆಯು ಪರಾಮರ್ಶಿಸುತ್ತದೆ. ಆದರೆ ಕಳೆದ ಎರಡು-ಮೂರು ವಾರಗಳಲ್ಲಿ ಈ ಸಂಖ್ಯೆಯು ಹೆಚ್ಚುಕಡಿಮೆ 10-15ಕ್ಕೆ ಏರಿದೆ ಎಂದವರು ತಿಳಿಸಿದ್ದಾರೆ.
ಭೂಸೇನೆಯಲ್ಲಿ ಈಗಾಗಲೇ 11 ಸಾವಿರ, ನೌಕಾಪಡೆಯಲ್ಲಿ 3 ಸಾವಿರದಷ್ಟು ಹಾಗೂ ವಾಯುಪಡೆಯಲ್ಲಿ 6 ಸಾವಿರದಷ್ಟು ಅಧಿಕಾರಿಗಳ ಕೊರತೆಯಿದ್ದು, ಇದೀಗ ಅಧಿಕಾರಿಗಳ ರಾಜೀನಾಮೆ ಸರಣಿಯು ಸೇನಾಪಡೆಗಳ ಆತಂಕಕ್ಕೆ ಕಾರಣವಾಗಿದೆ.
ಉಗ್ರ ನಿಗ್ರಹ ಕಾರ್ಯಾಚರಣೆ ಸಂದರ್ಭ ಸೇನಾ ಪದಕವನ್ನೂ ಪಡೆದು ಖ್ಯಾತರಾಗಿದ್ದ ಮೇಜರ್ ಅಮರ್ ಕ್ವಾತ್ರಾ ಅವರು 9 ವರ್ಷ ಸೇವೆ ಸಲ್ಲಿಸಿದ ಬಳಿಕ ರಾಜೀನಾಮೆ ನೀಡುತ್ತಿದ್ದಾರೆ. ಆದರೆ, ತಾನು ಹಣಕ್ಕಾಗಿ ಸೇನೆ ಸೇರಿಲ್ಲ, ಗೌರವಕ್ಕಾಗಿ ಸೇರಿದೆ. ಆದರೆ ಆಧುನಿಕ ಜೀವನ ಶೈಲಿಯೂ ಅಗತ್ಯವಿದೆ. ಈಗಿನ ವೇತನದಲ್ಲಿ ನನ್ನ ಮಗನನ್ನು ಪಬ್ಲಿಕ್ ಸ್ಕೂಲ್‌ಗೆ ಸೇರಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ ಅವರು.
ಆರನೇ ವೇತನ ಆಯೋಗ ಶಿಫಾರಸುಗಳು ಏನನ್ನುತ್ತದೆ? ಅಧಿಕಾರಿವರ್ಗವನ್ನು ಮತ್ತು ಸೇನಾಪಡೆಗಳನ್ನು ಅದು ಎರಡು ವಿಭಾಗಗಳಾಗಿ ವಿಂಗಡಿಸಿದೆ. ಕೆಳ ವೇತನ ವಿಭಾಗದಲ್ಲಿ ಸೇನೆಯಲ್ಲಿ ಬ್ರಿಗೇಡಿಯರ್ ಮಟ್ಟದವರೆಗೂ, ಅಧಿಕಾರಿ ವರ್ಗದಲ್ಲಿ ನಿರ್ದೇಶಕ ಮಟ್ಟದವರಿಗೂ ಸ್ಥಾನವಿದೆ.
ಈ ಶಿಫಾರಸಿನ ಪ್ರಕಾರ, 26 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ಬ್ರಿಗೇಡಿಯರ್ ಒಬ್ಬ, 15 ವರ್ಷ ಸೇವೆ ಸಲ್ಲಿಸಿದ ನಿರ್ದೇಶಕನಷ್ಟೇ ವೇತನ ಪಡೆಯುತ್ತಾನೆ.
32 ವರ್ಷದ ಸೇವೆಯ ಬಳಿಕ ಮೇಜರ್ ಜನರಲ್ ಒಬ್ಬ ಪಡೆಯುವಷ್ಟೇ ವೇತನವನ್ನು 20 ವರ್ಷ ಸೇವೆ ಸಲ್ಲಿಸಿದ ಜಂಟಿ ಕಾರ್ಯದರ್ಶಿ ಪಡೆಯುತ್ತಾನೆ.
ಈಗಾಗಲೇ ಸೇನಾಪಡೆಗಳಲ್ಲಿ ಸುಮಾರು 11 ಸಾವಿರ ಅಧಿಕಾರಿಗಳ ಕೊರತೆಯಿದೆ. ಸೇನಾಪಡೆಯಲ್ಲಿ ಈ ರೀತಿಯ ಮಧ್ಯಮವರ್ಗವು ತೀರಾ ಗೊಂದಲದಲ್ಲಿದೆ.
|