ಉಬ್ಬಸರೋಗದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಆಕೃತಿ ಸಾವನ್ನು ಖಂಡಿಸಿ ಪೋಷಕರು ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಮೋಡರ್ನ್ ಸ್ಕೂಲ್ ಶಾಲೆಗೆ ಎರಡು ದಿನಗಳ ರಜೆಯನ್ನು ಘೋಷಿಸಿದೆ.
ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಆರೋಪದ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ರಾಷ್ಟ್ರೀಯ ಮಕ್ಕಳ ಮಾನವ ಹಕ್ಕು ಆಯೋಗ ಆದೇಶ ನೀಡಿದೆ. ಅಲ್ಲದೇ ದೆಹಲಿ ಸರ್ಕಾರ ಕೂಡ ಘಟನೆಗೆ ಕುರಿತು ತನಿಖೆಗೆ ಆದೇಶಿಸಿದೆ. ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಖಂಡಿಸಿ ಗುರುವಾರದಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯನ್ನು ನಡೆಸುತ್ತಿರುವ ಪರಿಣಾಮ ಶಾಲೆಗೆ ಎರಡು ದಿನಗಳ ರಜೆ ಘೋಷಿಸುವ ನಿರ್ಧಾರ ಕೈಗೊಂಡಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
ಅಸ್ತಾಮಾದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಆಕೃತಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ ಎಂದು ಆಕ್ರೋಶಭರಿತ ಹೆತ್ತವರು ಮತ್ತು ಇತರ ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದ ಘಟನೆ ದೆಹಲಿಯ ವಸಂತ್ ವಿಹಾರದ ಮೋಡರ್ನ್ ಸ್ಕೂಲ್‌ನಲ್ಲಿ ಗುರುವಾರ ನಡೆದಿತ್ತು.
ಅಸ್ವಸ್ಥ ವಿದ್ಯಾರ್ಥಿನಿಯ ಕುರಿತು ನಿರ್ಲಕ್ಷ್ಯ ವಹಿಸಿದ್ದ ಪ್ರಾಂಶುಪಾಲರಾದ ಗೊಲ್ಡಿ ಮಲ್ಲೋತ್ರಾ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ದೆಹಲಿಯ ಇತರ ಶಾಲಾ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.
ಉಸಿರಾಡಲು ಕಷ್ಟಪಡುತ್ತಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಶಾಲೆಯು ವಾಹನ ಒಂದನ್ನು ನೀಡಿಲ್ಲ ಎಂಬುದು ಅತ್ಯಂತ ಅಮಾನವೀಯ ಎಂಬುದಾಗಿ ಶಾಲೆಯ ಹೆತ್ತವರು ಶಿಕ್ಷಕರ ಸಂಘಟನೆಯ ಮಾಜಿ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ನೂರಾರು ಕಾರುಗಳಿವೆ. ಸ್ವತಃ ಪ್ರಾಂಶುಪಾಲರೂ ಕಾರು ಹೊಂದಿದ್ದಾರೆ. ಅವರು ಅಂಬುಲೆನ್ಸ್‌ಗೆ ಯಾಕೆ ಕಾಯುತ್ತಿದ್ದರು. ಮಲ್ಲೋತ್ರ ಒಬ್ಬ ನೀತಿಯಿಲ್ಲದ ಪ್ರಾಂಶುಪಾಲೆಯಾಗಿದ್ದು ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. |