ದಕ್ಷಿಣಭಾರತದ 'ಸೌಮ್ಯ ಸ್ಥಳ'ಗಳಲ್ಲಿ ಭಯೋತ್ಪಾದನಾ ದಾಳಿಗಳ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಭದ್ರತಾ ಎಚ್ಚರ ವಹಿಸಲಾಗಿದೆ.
ಗುಪ್ತಚರ ಬ್ಯೂರೋವು ಆಂಧ್ರ ಪ್ರದೇಶಕ್ಕೆ ಎಚ್ಚರಿಕೆ ನೀಡಿರುವ ಕಾರಣ ಹೈದರಬಾದ್ ಸೇರಿದಂತೆ ಆಂಧ್ರದ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಹಿಂದೆಯೂ ಹೈದರಬಾದ್ ಉಗ್ರರ ಗುರಿಯಾಗಿದ್ದ ಕಾರಣ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಬಿ. ಪ್ರಸಾದ್ ರಾವ್ ಹೇಳಿದ್ದಾರೆ.
2007ರಲ್ಲಿ ಹೈದರಬಾದ್ ಮೇಲೆ ಎರಡು ದಾಳಿ ನಡೆದಿತ್ತು. ಮೇ ತಿಂಗಳಲ್ಲಿ ಮೆಕ್ಕಾ ಮಸೀದಿ ಮೇಲೆ ದಾಳಿನಡೆದಿದ್ದರೆ, ಆಗಸ್ಟ್ ತಿಂಗಳಲ್ಲಿ ಅವಳಿ ಸ್ಫೋಟಗಳನ್ನು ನಡೆಸಿದ್ದು ಇದರಲ್ಲಿ 50 ಮಂದಿ ಸಾವಿಗೀಡಾಗಿದ್ದರು.
ಐಟಿ ಕಂಪೆನಿಗಳು, ರೈಲ್ವೇ ನಿಲ್ದಾಣಗಳು, ಶಾಪಿಂಗ್ ಮಲ್‌ಗಳು, ಥಿಯೇಟರ್‌ಗಳು ಹಾಗೂ ರಕ್ಷಣಾ ನೆಲೆಗಳು ಹಾಗೂ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಯಾವುದೇ ವ್ಯಕ್ತಿಗಳು ಶಂಕಿತ ರೀತಿಯಲ್ಲಿ ವರ್ತಿಸುವುದನ್ನು ಕಂಡರೆ ಮಾಹಿತಿ ನೀಡಲು ಪೊಲೀಸರು ತಿಳಿಸಿದ್ದಾರೆ.
13 ಮಂದಿ ಬಂಧನ ಹೈದರಾಬಾದ್-ನವದೆಹಲಿ ಆಂಧ್ರಪ್ರದೇಶ ಎಕ್ಸ್‌ಪ್ರೆಸನಲ್ಲಿ ಪ್ರಯಾಣಿಸುತ್ತಿದ್ದ 13 ಮಂದಿ ಶಂಕಿತರನ್ನು ವಾರಂಗಲ್ ಜಿಲ್ಲೆಯ ಕಾಜಿಪೇಟೆ ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇವರೆಲ್ಲರೂ 20ರಿಂದ 30ರೊಳಗಿನ ಹರೆಯದ ಯುವಕರಾಗಿದ್ದಾರೆ. ಇದಲ್ಲದೆ ವ್ಯಾಪಕ ತಪಸಣಾ ಕಾರ್ಯಕೈಗೊಂಡಿರುವ ಹೈದರಾಬಾದ್ ಪೊಲೀಸರು ಇಲ್ಲೂ ನಾಲ್ವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಶೇಷ ಪೊಲೀಸ್ ತಂಡಗಳು ಹೊಟೇಲುಗಳು ಮತ್ತು ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ಇದೇವೇಳೆ ದಕ್ಷಿಣ ಭಾರತಕ್ಕೆ ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿಯನ್ನು ಕರ್ನಾಟಕದ ಗೃಹಸಚಿವ ವಿ.ಎಸ್. ಆಚಾರ್ಯ ದೃಢಪಡಿಸಿದ್ದಾರೆ.
"ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು ನುಸುಳಿರುವ ಮಾಹಿತಿ ಇದೆ. ಇವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಆದರೆ ಇದುವರೆಗೆ ಯಾವುದೇ ಸುಳಿವು ಲಭಿಸಿಲ್ಲ. ಎಚ್ಚರದಿಂದಿರುವಂತೆ ನೆರೆಯ ರಾಜ್ಯಗಳಿಗೂ ತಿಳಿಸಿದ್ದೇವೆ" ಎಂದು ಆಚಾರ್ಯ ತಿಳಿಸಿದ್ದಾರೆ. |