ಭಾರತೀಯ ಜನತಾ ಪಕ್ಷದ ಮುಖಂಡ, ಜಾರ್ಖಂಡ್ ಲೋಕಸಭಾ ಕ್ಷೇತ್ರದ ಸಂಸದ ಕರಿಯಾ ಮುಂಡಾ ಸೋಮವಾರ ಲೋಕಸಭೆಯ ಉಪ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬುಡಕಟ್ಟು ಜನಾಂಗದ ಪ್ರಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂದು ಲೋಕಸಭೆಯಲ್ಲಿ ನಡೆದ ಕಲಾಪದ ಸಂದರ್ಭದಲ್ಲಿ ಧ್ವನಿ ಮತದ ಮೂಲಕ ಕರಿಯಾ ಮುಂಡಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಡಳಿತಾರೂಢ ಯುಪಿಎ ಮತ್ತು ವಿರೋಧಪಕ್ಷದ ಸಂಸದರು ಪೂರ್ಣ ಬೆಂಬಲ ಸೂಚಿಸಿದರು.
ಕುಂತಿ ಲೋಕಸಭೆ ಕ್ಷೇತ್ರದಿಂದ ಸತತ ಆರು ಸಲ ಸಂಸದರಾಗಿ ಆಯ್ಕೆಯಾಗಿರುವ ಮುಂಡಾ, ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರೋಧಿ ಒಕ್ಕೂಟವಾದ ಎನ್‌ಡಿಎಗೆ ಲೋಕಸಭೆ ಉಪಸಭಾಧ್ಯಕ್ಷ ಸ್ಥಾನವನ್ನು ನೀಡಿತ್ತು. ಪ್ರತಿಯಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಪರ ಅಭ್ಯರ್ಥಿಯಾಗಿ ಬುಡಕಟ್ಟು ನಾಯಕ ಕರಿಯಾ ಮುಂಡಾ ಅವರನ್ನು ಆಯ್ಕೆ ಮಾಡುವಂತೆ ಬಿಜೆಪಿ ಮನವಿ ಮಾಡಿತ್ತು. ನಿರೀಕ್ಷೆಯಂತೆ ಇಂದು ಕರಿಯಾ ಮುಂಡಾ ಲೋಕಸಭೆ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. |