ನಕ್ಸಲರೊಂದಿಗೆ ನೇರ ಮಾತುಕತೆಯ ಪ್ರಸ್ತಾಪ ಇಲ್ಲ ಎಂಬುದಾಗಿ ಬುಧವಾರ ಕೇಂದ್ರ ಸರ್ಕಾರ ಹೇಳಿದೆ. ಆದರೆ ಯಾವುದೇ ರಾಜ್ಯ ಸರ್ಕಾರ ಮತ್ತು ಮಾವೋವಾದಿಗಳ ನಡುವಿನ ಮಾತುಕತೆಯನ್ನು ಸ್ವಾಗತಿಸುವುದಾಗಿ ಹೇಳಿದೆ.
"ಕೇಂದ್ರ ಸರ್ಕಾರಕ್ಕೆ ಮಾವೋವಾದಿ ಉಗ್ರರೊಂದಿಗೆ ನೇರ ಮಾತುಕತೆ ನಡೆಸುವ ಪ್ರಸ್ತಾಪವಿಲ್ಲ" ಎಂಬುದಾಗಿ ಗೃಹಖಾತೆಯ ರಾಜ್ಯ ಸಚಿವ ಅಜಯ್ ಮಕೇನ್ ಅವರು ರಾಜ್ಯಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ.
"ನಕ್ಸಲರು ಕಳವಳ ಹೊಂದಿರುವ ವಿಚಾರಗಳ ಕುರಿತು ಹಿಂಸಾಚಾರದ ಮಾರ್ಗವನ್ನು ಬಿಟ್ಟು, ಶಸ್ತ್ರಾಸ್ತ್ರ ತ್ಯಜಿಸಿ ಮಾತುಕತೆಗೆ ಮುಂದಾಗುವಂತೆ ನಕ್ಸಲರಿಗೆ ರಾಜ್ಯ ಸರ್ಕಾರಗಳು ಆಗೀಗ ಮನವಿ ಮಾಡುತ್ತಲೇ ಬಂದಿವೆ" ಎಂಬುದಾಗಿ ಅವರು ನುಡಿದರು.
ಯಾವುದಾದರು ರಾಜ್ಯ ಸರ್ಕಾರವು ಮಾವೋವಾದಿಗಳೊಂದಿಗೆ ಮಾತುಕತೆ ನಡೆಸುತ್ತಿದೆಯೇ ಎಂಬುದು ತಿಳಿದಿಲ್ಲ ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ. |