ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಮುಖಂಡ ಕೆ. ಚಂದ್ರಶೇಖರ ರಾವ್ ಗುರಿಯಿರುವುದು ತೆಲಂಗಾಣ ರಾಜ್ಯ ರಚನೆ ಮಾತ್ರ. ಹಾಗಾಗಿ ಆಂಧ್ರಪ್ರದೇಶದಿಂದ ಪ್ರತ್ಯೇಕಗೊಂಡ ಬಳಿಕ ಟಿಆರ್ಎಸ್ ಪಕ್ಷವು ಕಾಂಗ್ರೆಸ್ ಜತೆ ವಿಲೀನವಾಗಲಿದೆ ಎಂದು ತೆಲಂಗಾಣ ಪ್ರಾಂತ್ಯದ ಕಾಂಗ್ರೆಸ್ ಸಂಸದರೊಬ್ಬರು ತಿಳಿಸಿದ್ದಾರೆ.
ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಟಿಆರ್ಎಸ್ ಪಕ್ಷವು ಕಾಂಗ್ರೆಸ್ ಜತೆ ವಿಲೀನವಾಗಲಿದೆ ಎಂದು ಆಂಧ್ರಪ್ರದೇಶದ ನಿಜಾಮಾಬಾದ್ ಕಾಂಗ್ರೆಸ್ ಸಂಸದ ಮಧು ಗೌಡ್ ಯಕ್ಷಿ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ತಾನು ಟಿಆರ್ಎಸ್ ಮುಖಂಡ ಚಂದ್ರಶೇಖರ ರಾವ್ ಸೇರಿದಂತೆ ಹಲವು ಪ್ರಮುಖ ನಾಯಕರ ಜತೆ ಸತತ ಸಂಪರ್ಕದಲ್ಲಿದ್ದು, ತೆಲಂಗಾಣ ಪ್ರತ್ಯೇಕ ರಾಜ್ಯವೊಂದೇ ರಾವ್ ಗುರಿ ಎಂದು ಅವರು ತಿಳಿಸಿದರು.
ಸತತ 11 ದಿನಗಳ ಆಮರಣಾಂತ ಉಪವಾಸ ಕೈಗೊಂಡಿದ್ದ ರಾವ್ ದೈಹಿಕ ಪರಿಸ್ಥಿತಿ ಹದಗೆಡುತ್ತಿದ್ದಂತೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಿಂದ ಕೇಂದ್ರ ಕಳೆದ ವಾರ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಅಸ್ತು ಎಂದಿತ್ತು.
2004ರಲ್ಲಿ ಕಾಂಗ್ರೆಸ್ ಮತ್ತು ಟಿಆರ್ಎಸ್ ಜತೆಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 17ರಲ್ಲಿ 16 ಸ್ಥಾನಗಳನ್ನು ಈ ಪ್ರಾಂತ್ಯದಲ್ಲಿ ಗೆದ್ದಿರುವುದನ್ನು ಕೂಡ ಈ ಸಂಸದ ನೆನಪಿಸಿದ್ದಾರೆ.
ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಪ್ರತ್ಯೇಕಿಸಿದ ಬಳಿಕ ಎರಡೂ ರಾಜ್ಯಗಳಲ್ಲಿ ತನ್ನದೇ ಸರಕಾರ ರಚಿಸಲು ಬೇಕಾದಷ್ಟು ಶಾಸಕರ ಬಲ ಕಾಂಗ್ರೆಸ್‌ಗಿದೆ ಎಂದೂ ಯಕ್ಷಿ ಅಭಿಪ್ರಾಯಪಟ್ಟಿದ್ದಾರೆ.
ಅದೇ ಹೊತ್ತಿಗೆ ತೆಲಂಗಾಣ ಹೋರಾಟವನ್ನು 'ಜನತೆಯ ಚಳುವಳಿ' ಎಂದು ಬಣ್ಣಿಸಿರುವ ಈ ನಾಯಕ, ಅಖಂಡ ಆಂಧ್ರಪ್ರದೇಶಕ್ಕಾಗಿ ರಾಯಲಸೀಮೆ ಮತ್ತು ಆಂಧ್ರ ಕರಾವಳಿ ಶಾಸಕರು ಮತ್ತು ಸಂಸದರು ನಡೆಸುತ್ತಿರುವ ಹೋರಾಟವನ್ನು 'ನಾಯಕರ ಚಳುವಳಿ' ಎಂದು ಲೇವಡಿ ಮಾಡಿದ್ದಾರೆ.