ಕರ್ಕರೆ, ಕಾಮ್ಟೆ, ಸಾಲಸ್ಕರ್‌ರನ್ನು ನಾನು ಕೊಂದಿಲ್ಲ: ಕಸಬ್
ಮುಂಬೈ, ಸೋಮವಾರ, 21 ಡಿಸೆಂಬರ್ 2009( 15:50 IST )
ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ ಮತ್ತು ವಿಜಯ್ ಸಾಲಸ್ಕರ್ ಅವರುಗಳನ್ನು ಕೊಂದದ್ದು ನಾನಲ್ಲ; ಅಷ್ಟಕ್ಕೂ ಆ ಸಂದರ್ಭದಲ್ಲಿ ನಾನು ಅಲ್ಲಿರಲೇ ಇಲ್ಲ ಎಂದು ಪಾಕಿಸ್ತಾನ ಮೂಲದ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್ ಹೇಳಿದ್ದು, ಮುಂಬೈ ದಾಳಿಯಲ್ಲಿ ತನ್ನ ಪಾತ್ರವಿಲ್ಲವೆಂದು ಸೋಮವಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾನೆ.
ನಾನು ಸ್ಥಳದಲ್ಲೇ ಇರಲಿಲ್ಲ, ಹಾಗಾಗಿ ನಾನು ಅವರತ್ತ ಗುಂಡು ಹಾರಿಸಿದ್ದೇನೆ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ವಿಶೇಷ ವಿಚಾರಣಾ ನ್ಯಾಯಾಲಯದಲ್ಲಿ ಕಸಬ್ ತಿಳಿಸಿದ್ದಾನೆ.
PTI
ಮುಂಬೈ ದಾಳಿ ಸಂದರ್ಭದಲ್ಲಿ ನಾನು ಸಿಎಸ್‌ಟಿ, ಕಾಮಾ ಹಾಸ್ಪಿಟಲ್ ಅಥವಾ ಗಿರ್ಗಾಮ್ ಚೌಪತಿ (ಪೊಲೀಸರು ಆತನನ್ನು ಸೆರೆ ಹಿಡಿದ ಸ್ಥಳ)ಗಳಲ್ಲಿ ಇರಲಿಲ್ಲ. ಯಾಕೆಂದರೆ ನನ್ನನ್ನು ದಾಳಿ ನಡೆಯುವುದಕ್ಕೆ ಮೊದಲೇ ಪೊಲೀಸರು ಬಂಧಿಸಿದ್ದರು. ದಾಳಿಯ ನಂತರ ನನ್ನನ್ನು ಅಪರಾಧ ದಳದ ಅಧಿಕಾರಿಗಳು ನನಗೆ ಸ್ಥಳ ಪರಿಚಯ ಮಾಡಿಸಿದರು ಎಂದು ಆತ ತನ್ನ ಮೇಲಿದ್ದ ಆರೋಪಗಳನ್ನು ಹಾಗೂ ಈ ಹಿಂದೆ ನೀಡಿದ್ದ ತಪ್ಪೊಪ್ಪಿಗೆಗಳನ್ನು ನಿರಾಕರಿಸಿದ್ದಾನೆ.
ಅವರು ಪೊಲೀಸರು, ಹಾಗಾಗಿ ಆರೋಪಿಯೊಬ್ಬನ ಅಗತ್ಯ ಅವರಿಗಿತ್ತು. ನನ್ನನ್ನು ಬಲಿಪಶುವಾಗಿ ಬಳಸಿಕೊಂಡರು ಎಂದೂ ಇದೇ ಸಂದರ್ಭದಲ್ಲಿ ಆತ ಆರೋಪಿಸಿದ.
ನಿನ್ನ ಕೈಗೆ ಗುಂಡೇಟಿನಿಂದ ಹೇಗೆ ಗಾಯವಾಯಿತು ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ತಾನು ಪೊಲೀಸರ ವಶದಲ್ಲಿದ್ದಾಗ ನನಗೆ ಮತ್ತು ಬರುವ ಔಷಧಿ ನೀಡಿ ಗುಂಡು ಹೊಡೆದು ಗಾಯ ಮಾಡಲಾಯಿತು ಎಂದುತ್ತರಿಸಿದ.
ಇಂದು ನನ್ನ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ, ಹಾಗಾಗಿ ಹೇಳಿಕೆ ಪಡೆಯುವುದನ್ನು ಮುಂದೂಡಿ ಎಂದು ನ್ಯಾಯಾಧೀಶ ಎಂ.ಎಲ್. ತಹಲಿಯಾನಿಯವರಿಗೆ ವಿಚಾರಣೆ ಪ್ರಕ್ರಿಯೆ ಆರಂಭವಾಗುವುದಕ್ಕೂ ಮೊದಲು ಕಸಬ್ ಮನವಿ ಮಾಡಿದನಾದರೂ, ಅವರದನ್ನು ಪುರಸ್ಕರಿಸಲಿಲ್ಲ.
ಕಳೆದ ವಾರವಷ್ಟೇ ವಿಚಾರಣೆ ಸಂದರ್ಭದಲ್ಲಿ ಆತ ತಾನು ಈ ಹಿಂದೆ ನೀಡಿದ್ದ ಎಲ್ಲಾ ತಪ್ಪೊಪ್ಪಿಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದ. ಪೊಲೀಸರು ಹಿಂಸೆ ನೀಡಿ ಬಲವಂತ ಮಾಡಿದ ಕಾರಣ ತಾನು ತಪ್ಪೊಪ್ಪಿಕೊಂಡಿದ್ದೆ, ಅಷ್ಟಕ್ಕೂ ತಾನು ಉಗ್ರ ಕಸಬ್ ಅಲ್ಲ; ಆತನನ್ನು ಪೊಲೀಸರು ಕೊಂದಿದ್ದಾರೆ. ನಾನು ಅವನಂತೆ ಕಾಣುವ ಬೇರೆ ವ್ಯಕ್ತಿ ಎಂದು ಹೇಳಿದ್ದ.