ಕಳೆದೆರಡು ದಿನಗಳ ತನ್ನ ರೌಡಿ ವರ್ತನೆ ಮೆರೆದಿದ್ದ ಮುಂಬೈ ದಾಳಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಬಾಂಬೆ ಹೈಕೋರ್ಟ್ ವಿಚಾರಣೆಗೆ ಆಗಮಿಸಲು ನಿರಾಕರಿಸುವ ಮೂಲಕ ಉದ್ಧಟತನ ಮುಂದುವರಿಸಿದ್ದಾನೆ. ಈ ನಡುವೆ ಆತನ ವಕೀಲರನ್ನು ಭೇಟಿ ಮಾಡಲು ಅಧಿಕಾರಿಗಳು ನಿರಾಕರಿಸುವ ಪ್ರಸಂಗವೂ ವರದಿಯಾಗಿದೆ.
ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಲು ಅವಕಾಶ ನೀಡಬೇಕೆಂದು ಬೇಡಿಕೆ ಮುಂದಿಟ್ಟ ಮರುದಿನ, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಕಸಬ್ ನಿರಾಕರಿಸಿದ್ದಾನೆ. ಇದನ್ನು ಹೇಳಿರುವುದು ಜೈಲು ಸಿಬ್ಬಂದಿಗಳು.
PTI
ಮುಂಬೈ ದಾಳಿ ಸಂಬಂಧ ವಿಶೇಷ ನ್ಯಾಯಾಲಯವು ಘೋಷಿಸಿರುವ ಮರಣ ದಂಡನೆ ಶಿಕ್ಷೆಯನ್ನು ಖಚಿತಪಡಿಸುವ ವಿಚಾರಣೆ ಬಾಂಬೆ ಹೈಕೋರ್ಟಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗುತ್ತಿದ್ದಂತೆ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆಯವರಿಗೆ ಈ ಮಾಹಿತಿಯನ್ನು ಜೈಲು ಅಧಿಕಾರಿಗಳು ತಿಳಿಸಿದರು.
ಆದರೂ ವಿಚಾರಣೆಯನ್ನು ಮುಂದುವರಿಸಿದ ನ್ಯಾಯಾಧೀಶರು, ಸರಕಾರಿ ವಕೀಲ ಉಜ್ವಲ್ ನಿಕ್ಕಂ ವಾದವನ್ನು ಸತತ ಮೂರನೇ ದಿನವೂ ಆಲಿಸಿದರು.
ತನ್ನನ್ನು ಆರ್ಥರ್ ರೋಡ್ ಜೈಲು ಅಧಿಕಾರಿಗಳು ಕಸಬ್‌ನನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಿದ್ದಾರೆ. ಕಾರಾಗೃಹದ ಅವಧಿ ಮುಗಿದಿರುವುದರಿಂದ ಭೇಟಿ ಸಾಧ್ಯವಿಲ್ಲ ಎಂದು ಕಾರಣ ಹೇಳಿದ್ದಾರೆ ಎಂದು ಅತ್ತ ಮತ್ತೊಂದು ಬೆಳವಣಿಗೆಯಲ್ಲಿ ವಕೀಲ ಅಮೀನ್ ಸೋಲ್ಕರ್ ಅವರು ನ್ಯಾಯಾಧೀಶರಿಗೆ ದೂರು ನೀಡಿದರು.
ತನ್ನ ಕಕ್ಷಿಗಾರ ಕಸಬ್‌ನನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ನ್ಯಾಯಾಲಯವು ಆದೇಶ ಹೊರಡಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಪ್ರತಿಕ್ರಿಯಿಸಿದರು.
ಮಂಗಳವಾರ ಸಂಜೆ 6.30ಕ್ಕೆ ಸೋಲ್ಕರ್ ಅವರು ಕಸಬ್‌ನನ್ನು ಭೇಟಿ ಮಾಡಲು ಜೈಲಿಗೆ ತೆರಳಿದ್ದರು. ಆದರೆ ಜೈಲು ಸಿಬ್ಬಂದಿಗಳು ಸಮಯ ಮುಗಿದಿದೆ ಎಂಬ ಕಾರಣ ನೀಡಿ ಭೇಟಿಗೆ ಅವಕಾಶ ನಿರಾಕರಿಸಿದ್ದರು.