ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಗೆ 150 ಕೋಟಿ ರೂ. ಗಣಿ ಲಂಚ ನೀಡಲಾಗಿದೆ ಎಂದು ಆರೋಪ ಮಾಡಿದ ಗಣಿರೆಡ್ಡಿ ಎಂದೇ ಪ್ರಖ್ಯಾತರಾದ ಜನಾರ್ದನರೆಡ್ಡಿ ಅವರು ಮತ್ತೆ ದೇವೇಗೌಡರ ಕುಟುಂಬದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.
ಲಂಚದ ಬಗ್ಗೆ ಸಿಡಿ ಬಿಡುಗಡೆಗೆ ಯತ್ನಿಸಿದ್ದ ವಿಧಾನಪರಿಷತ್ ಸದಸ್ಯ ಜನಾರ್ದನರೆಡ್ಡಿ ಈಗ ಸಿಎಂ ವಿರುದ್ಧ ಮತ್ತೆ ಗುಡುಗಿದ್ದಾರೆ.
ಲಂಚ ಹಗರಣಕ್ಕೆ ಸಂಬಂಧಿಸಿ ತಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಹೇಳುತ್ತಿರುವ, ಬಿಜೆಪಿಯಿಂದ ಅಮಾನತಿಗೊಳಗಾದ ರೆಡ್ಡಿ ಅವರು ಅವುಗಳನ್ನು ಬಹಿರಂಗವಾಗಿಯೇ ಜನರೆದುರಿಗೆ ತೋರಿಸುವ ಸಮಯ ಬಂದಿದೆ ಎಂದಿದ್ದಾರೆ.
ಹಿಂದೆ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಿವಾರ್ಯವಾಗಿ ಬಾಯಿಮುಚ್ಚುವಂತೆ ಸಲಹೆ ನೀಡಿದ ಬಿಜೆಪಿಯ ಕೆಲವು ನಾಯಕರು, ಈಗ ಇದಕ್ಕೆ ಬೆಂಬಲ ನೀಡಿದಂತಾಗಿದೆ. ತಮ್ಮ ಹಾಗೂ ಶ್ರೀರಾಮುಲು ಪ್ರಕರಣವನ್ನೇ ಮುಂದಿಟ್ಟುಕೊಂಡು ಕುಮಾರಸ್ವಾಮಿ ಹಾಗೂ ದೇವೇಗೌಡರು ಮಾಡಿರುವ ಕುತಂತ್ರ ಕುಂಟು ನೆಪ ಹೇಳಿ ಅಧಿಕಾರ ಹಸ್ತಾಂತರಕ್ಕೆ ನಿರಾಕರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಸಿಎಂ ಹಾಗೂ ಗೌಡರ ಕುಟುಂಬದ ಭ್ರಷ್ಟಾಚಾರ ಕುರಿತು ಇಷ್ಟರಲ್ಲಿಯೇ ತಾವು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಈ ಸಂದರ್ಭದಲ್ಲಿ ಅವುಗಳೆಲ್ಲವನ್ನೂ ಪ್ರದರ್ಶಿಸುವುದಾಗಿ ಸ್ಪಷ್ಟಪಡಿಸಿದರು.
|