ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನ ಒಟ್ಟು ಬಜೆಟ್‌ನಲ್ಲಿ ನೀಡಿರುವ ಅನುದಾನ 49.20 ಕೋಟಿ ರೂಪಾಯಿ ಮತ್ತು ವಿಶೇಷ ಅಭಿವೃದ್ಧಿ ಕಾರ್ಯಕ್ರಮದಲ್ಲಿ 17 ಕೋಟಿ, ಒಟ್ಟು 66.20 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಲಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್ ತಿಳಿಸಿದ್ದಾರೆ.
ಹಾವೇರಿಯ ಪ್ರವಾಸ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಅಲ್ಪಸಂಖ್ಯಾತರ ಜನಸಂಖ್ಯೆ ಆಧಾರದಲ್ಲಿ ವಿವಿಧ ಯೋಜನೆಗಳನ್ನು ನಿಗದಿಪಡಿಸಲಾಗಿದೆ. ಆಯವ್ಯಯದಲ್ಲಿ ನೀಡಿದ 49.20 ಕೋಟಿ ರೂಪಾಯಿಯಲ್ಲಿ ಸ್ವಾವಲಂಬನೆ, ಶ್ರಮಶಕ್ತಿ, ಮೈಕ್ರೋ ಸಹಾಯಧನ, ಅರಿವು ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯದ 31,100 ಫಲಾನುಭವಿಗಳಿಗೆ ನೆರವು ಕಲ್ಪಿಸಲಾಗುವುದು ಎಂದರು.
ವಿಶೇಷ ಅಭಿವೃದ್ಧಿ ಕಾರ್ಯಕ್ರಮದಡಿ ಒದಗಿಸಲಾಗಿದ 17 ಕೋಟಿ ರೂಪಾಯಿಗಳಲ್ಲಿ ಮನೆ ಕಟ್ಟುವ, ಅಲ್ಪ ಸಂಖ್ಯಾತರಿಗೆ ಸಾಲ ಹಾಗೂ ವಾಸದ ನಿವೇಶನ ಖರೀದಿಸಲು ಸಾಲ ನೀಡಲಾಗುವುದು. ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಹಣಕಾಸು ನಿಗಮದಿಂದ ಕ್ಲಸ್ಟರ್ ಮಟ್ಟದಲ್ಲಿ ನೇರ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
|