|
ಪುಟಾಣಿ ಲಕ್ಷ್ಮಿ ಶಸ್ತ್ರಚಿಕಿತ್ಸೆ ಯಶಸ್ವಿ
|
|
|
ಬೆಂಗಳೂರು, ಬುಧವಾರ, 7 ನವೆಂಬರ್ 2007( 11:25 IST )
|
|
|
|
|
|
|
|
ವೈದ್ಯಲೋಕಕ್ಕೆ ಸವಾಲಾಗಿದ್ದ, ನಾಲ್ಕು ಕಾಲು, ನಾಲ್ಕು ಕೈಗಳುಳ್ಳ ಮಗುವಿನ ಅನವಶ್ಯಕ ಅಂಗಗಳನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬೆಂಗಳೂರು ವೈದ್ಯಕೀಯ ಜಗತ್ತು ಮತ್ತೊಂದು ದಾಖಲೆ ಮಾಡಿದೆ.
ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ವಿಶೇಷ ಶಸ್ತ್ರ ಚಿಕಿತ್ಸೆಗೆ ದಾಖಲಾಗಿರುವ ಪುಟಾಣಿ ಲಕ್ಷ್ಮಿಗೆ ವಿಶೇಷ ಶಸ್ತ್ರ ಚಿಕಿತ್ಸೆ ಇಂದು ಬೆಳಗ್ಗೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
40 ತಾಸುಗಳ ಸುದೀರ್ಘ ಅವಧಿಯ ಈ ಶಸ್ತ್ರ ಚಿಕಿತ್ಸೆ ದೇಶದೆಲ್ಲೆಡೆ ಕುತೂಹಲಕ್ಕೆ ಕಾರಣವಾಗಿತ್ತು.
ರಾಜ್ಯದ ವಿವಿಧೆಡೆಗಳಲ್ಲಿ ಲಕ್ಷ್ಮಿಯ ಆರೋಗ್ಯಕ್ಕಾಗಿ ಪ್ರಾರ್ಥನೆಗಳನ್ನು ನಡೆಸಲಾಗಿತ್ತು. ಶಸ್ತ್ರ ಚಿಕಿತ್ಸೆ ನಡೆಯುತ್ತಿರುವ ನಗರದ ನಾರಾಯಣ ಹೆಲ್ತ್ ಸಿಟಿಯಲ್ಲಿ ವೈದ್ಯಲೋಕಕ್ಕೆ ಸವಾಲಾಗಿರುವ ಈ ಶಸ್ತ್ರ ಚಿಕಿತ್ಸೆಯ ಸುದ್ದಿಯನ್ನು ನೇರಪ್ರಸಾರ ಮಾಡಲು ಬಹುತೇಕ ಮಾಧ್ಯಮ ಕ್ಯಾಮರಾಗಳು ಕಾತುರದಿಂದಿದ್ದವು.
ಐವರು ತಜ್ಞರ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ನಡೆಸಿದ್ದು, ಆಸ್ಪತ್ರೆ ಮುಖ್ಯಸ್ಥರೂ ಆದ ಮೂಳೆ ತಜ್ಞ ಡಾ.ಶರಣ್ ಪಾಟೀಲ್ ಇದರ ನೇತೃತ್ವ ವಹಿಸಿದ್ದಾರೆ. ಅವರೇ ಹಣಕಾಸಿನ ನೆರವನ್ನೂ ನೀಡಿದ್ದಾರೆ.
ಒಂದೇ ತಲೆ ಇರುವ ಅವಳಿ ಮಕ್ಕಳ ಸಂಯೋಗದಿಂದಾಗಿ ಈ ವೈಕಲ್ಯ ಉಂಟಾಗಿದ್ದು, ಎರಡು ವರ್ಷದ ಬಾಲಕಿ ಲಕ್ಷ್ಮಿಯು ಬಿಹಾರದ ಅರಾರಿಯಾ ಜಿಲ್ಲೆಯ ಪುಟ್ಟ ಹಳ್ಳಿಯವಳು.
ಹಳ್ಳಿಗರು ಆಕೆಯನ್ನು ಮೊದಲು ದೇವಿ ಲಕ್ಷ್ಮೀಯ ಅವತಾರ ಎಂದು ನಂಬಿದ್ದರು. ಆದರೆ ಆಕೆಯದು ಇದು ಅಂಗ ವೈಕಲ್ಯ ಎಂಬುದು ಕೆಲವು ಸಮಯದ ಬಳಿಕ ಅವರ ಅರಿವಿಗೆ ಬಂದಿತ್ತು.
ದುಬಾರಿ ಶಸ್ತ್ರಚಿಕಿತ್ಸೆ ಮಾಡಿಸಲಾರದ ಲಕ್ಷ್ಮಿಯ ಹೆತ್ತವರಿಗೆ ಬೆಂಗಳೂರಿನ ವೈದ್ಯ ಶರಣ್ ಪಾಟೀಲ್ ಸಹಾಯ ಹಸ್ತ ನೀಡಿದ್ದು, ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸುವುದಾಗಿ ಭರವಸೆ ನೀಡಿದ್ದರು.
ಅವಳಿ ಮಕ್ಕಳ ಜಠರ ಭಾಗದಲ್ಲಿ ಒಂದನ್ನೊಂದು ಕೂಡಿಕೊಂಡಿರುವ ಇಶಿಯೋಫೇಗಸ್ ಟೆಟ್ರಾಪಸ್ ಎಂಬ ವೈದ್ಯಕೀಯ ಜಗತ್ತಿನ ಅಪರೂಪದ ವೈಕಲ್ಯ ಇದಾಗಿದ್ದು, ಈ ಕಾರಣಕ್ಕೆ ನಾಲ್ಕು ಕೈ, ನಾಲ್ಕು ಕಾಲುಗಳನ್ನು ಲಕ್ಷ್ಮಿ ಹೊಂದಿದ್ದಾಳೆ. ಮತ್ತೊಂದು ಅವಳಿ ಮಗುವಿಗೆ ತಲೆಯಿಲ್ಲದ ಕಾರಣ, ಪರಾವಲಂಬಿಯಂತೆ ಈ ಮಗು ಗೋಚರಿಸುತ್ತದೆ.
ಲಕ್ಷ್ಮಿಯ ದೇಹದಿಂದ ಪರಾವಲಂಬಿಯ ಭಾಗವನ್ನು ತೆಗೆಯುವ ಸವಾಲನ್ನು ವೈದ್ಯರು ಹೊಂದಿದ್ದು, ಆಕೆ ಬೆಳೆದಲ್ಲಿ ಅದು ಮತ್ತಷ್ಟು ಸಂಕೀರ್ಣ ಶಸ್ತ್ರಚಿಕಿತ್ಸೆಯಾಗುವ ಸಾಧ್ಯತೆಗಳಿದ್ದವು.
ಮಗುವಿನ ಪೋಷಣೆಯು ಸಂಕೀರ್ಣವಾಗುತ್ತಿದೆ. ಈ ಪರಾವಲಂಬಿ ಜೀವಿಯ ಭಾಗವನ್ನು ಪೋಷಿಸುವುದು ಮಗುವಿಗೆ ಕಷ್ಟಕರ ಎಂದು ತಿಳಿಸಿರುವ ಡಾ.ಪಾಟೀಲ್, ಶಸ್ತ್ರಚಿಕಿತ್ಸೆಗೆ 48 ಗಂಟೆ ತಗುಲಬಹುದು ಎಂದಿದ್ದಾರೆ. 16 ವಿಶೇಷ ತಜ್ಞರೂ ಸೇರಿದಂತೆ, 36 ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಶಸ್ತ್ರಚಿಕಿತ್ಸೆಯು ಶೇ.25ರಷ್ಟು ರಿಸ್ಕ್ ಒಳಗೊಂಡಿದೆ ಎಂಬುದರ ಅರಿವಿದ್ದರೂ, ತಮ್ಮ ಮಗುವಿಗೆ ಸಾಧ್ಯವಿರುವ ಅತ್ಯುತ್ತಮ ಚಿಕಿತ್ಸೆ ಮಾಡಿಸಲು ಲಕ್ಷ್ಮಿಯ ಹೆತ್ತವರಾದ ಶಂಭು, ಪೂನಂ ಮನಸ್ಸು ಗಟ್ಟಿ ಮಾಡಿದ್ದರು. ಅವರಿಬ್ಬರೂ ಕೂಲಿ ಮಾಡಿ ಬದುಕುವವರು. ಇದು ಅವರ ಎರಡನೇ ಮಗು. ಅಕ್ಟೋಬರ್ 3ರಂದು ಅವರು ಸ್ಪರ್ಶ ಆಸ್ಪತ್ರೆಗೆ ಬಂದಿದ್ದರು.
|
|
|
|
|
|
|
|