ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ಎರಡು ತಿಂಗಳುಗಳಲ್ಲೇ ಕೇಂದ್ರ ಸರಕಾರವು 90,758 ಕೋಟಿ ರೂಪಾಯಿಗಳಷ್ಟು ಆರ್ಥಿಕ ಕೊರತೆಯನ್ನೆದುರಿಸುತ್ತಿದ್ದು, ಬಜೆಟ್ ಅಂದಾಜು ಪ್ರಮಾಣದ ಶೇಕಡಾ 27.3ನ್ನು ಈಗಾಗಲೇ ತಲುಪಿದೆ.2009-10 ರ ಅವಧಿಯ ಬಜೆಟ್‌ನ ಅಂದಾಜು ಆರ್ಥಿಕ ಕೊರತೆಯು 3,32,835 ಕೋಟಿ ರೂ. ಕಳೆದ ವರ್ಷದ 2008-09ರ ಅವಧಿಯ ಮೊದಲೆರಡು ತಿಂಗಳುಗಳ ಆರ್ಥಿಕ ಕೊರತೆಯು ವರ್ಷದ ಬಜೆಟ್‌ನ ಶೇಕಡಾ 54.9ರಷ್ಟಿತ್ತು. ಸಾಲ, ಖರ್ಚುಗಳು ಸೇರಿದಂತೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತಿಂಗಳಿನಲ್ಲೇ ಆದಾಯದ ಗುರಿಯ ಶೇಕಡಾ 16ರಷ್ಟು ಕೊರತೆ ಕಂಡು ಬಂದಿತ್ತು. ಏಪ್ರಿಲ್ ತಿಂಗಳಿನಲ್ಲಿ ಉಂಟಾದ ಖೋತಾ 54,100 ಕೋಟಿ ರೂಪಾಯಿಗಳು. 2009-10ರ ಮಧ್ಯಂತರ ಬಜೆಟ್ ಅವಧಿಗೆ ಒಟ್ಟು ದೇಶೀ ಉತ್ಪಾದನಾ ವೆಚ್ಚದ ಶೇಕಡಾ 5.5ರಷ್ಟು ಆರ್ಥಿಕ ಕೊರತೆಯನ್ನೆದುರಿಸಲಿದೆ ಎಂದು ಅಂದಾಜು ಮಾಡಲಾಗಿತ್ತು.ಆದಾಯ ಕೊರತೆಯು ಪೂರ್ಣ ಹಣಕಾಸು ವರ್ಷದ 2,38,534 ಕೋಟಿ ರೂಪಾಯಿಗಳ ಅಂದಾಜಿನ ಶೇಕಡಾ 33.9ರಂತೆ 80,963 ಕೋಟಿ ರೂಪಾಯಿಗಳಿಗೇರಿದೆ. |