ಸತ್ಯಂ ಎಂಬ ಶಬ್ದವೇ ಅಪಭ್ರಂಶವಾಗಿಬಿಟ್ಟಿದೆ. 2008 ಇಸವಿಯು ಟಿಸಿಎಸ್, ಇನ್ಫೋಸಿಸ್, ವಿಪ್ರೋ ಬಳಿಕ ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿ ಎಂದು ಕರೆಸಿಕೊಂಡ ಸತ್ಯಂ ಕಂಪ್ಯೂಟರ್ಸ್ ಇತಿಹಾಸದಲ್ಲೊಂದು ಕರಾಳ ಅಧ್ಯಾಯ. ಇದು ಶೇರುದಾರರ ಬದುಕಿನ ಕರಾಳ ಅಧ್ಯಾಯವೂ ಆಗಿರುವುದು ವಿಪರ್ಯಾಸ.ಶೇರುದಾರರಿಗೆ, ತನ್ನದೇ ನೌಕರರಿಗೆ, ಒಟ್ಟಿನಲ್ಲಿ ಇಡೀ ವಿಶ್ವಕ್ಕೇ ಕಳೆದ ಹಲವಾರು ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಂದಿದ್ದ, ಹೈದರಾಬಾದ್ ಮುಖ್ಯಾಲಯ ಹೊಂದಿರುವ ಸತ್ಯಂನ ಪ್ರೊಮೋಟರ್ ಮತ್ತು ಚೇರ್ಮನ್ ಆಗಿರುವ ರಾಮಲಿಂಗ ರಾಜು ಕೊನೆಗೂ ಸತ್ಯ ಹೇಳಿ ಇಡೀ ವಿಶ್ವವನ್ನು, ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿದ್ದಾರೆ. ಇದುವರೆಗೆ ಅವರು ಹೇಳುತ್ತಾ ಬಂದಿದ್ದುದು ಸಣ್ಣಪುಟ್ಟ ಸುಳ್ಳೇ? ಬರಾಬರಿ ಏಳು ಸಾವಿರ ಕೋಟಿ ರೂಪಾಯಿಯ ಸುಳ್ಳು!ಭಾರೀ ಲಾಭದಲ್ಲಿದ್ದೇವೆ ಎಂದು ಕಾಗದಪತ್ರಗಳಲ್ಲಿ ತೋರಿಸುತ್ತಾ, ಬ್ಯಾಂಕು ಬ್ಯಾಲೆನ್ಸ್ ದಪ್ಪವಾಗುತ್ತಲೇ ಇದೆ ಎನ್ನುತ್ತಾ, ಇಲ್ಲದ ಆದಾಯವನ್ನು, ಇಲ್ಲದ ಬಡ್ಡಿಯ ಗಳಿಕೆಯನ್ನು ತೋರಿಸುತ್ತಾ, ಸತ್ಯಂ ಶೇರು ಬೆಲೆಗಳು ಏರುವಂತೆ ಮಾಡಿದ್ದ 54ರ ಹರೆಯದ ಅಮೆರಿಕದಿಂದ ಎಂಬಿಎ ಪದವಿ ಪಡೆದಿದ್ದ ರಾಜು, ಕೊನೆಗೂ ಬಾಯಿ ಬಿಡುವ ಮೂಲಕ, ಲೆಕ್ಕಪತ್ರ ಪರಿಶೋಧಕರ (ಸತ್ಯಂ ಪರವಾಗಿ ಆಡಿಟಿಂಗ್ ಮಾಡುತ್ತಿರುವುದು ಪ್ರೈಸ್‌ವಾಟರ್‌ಹೌಸ್ ಕೂಪರ್ಸ್ ಎಂಬ ಸಂಸ್ಥೆ) ಪ್ರಾಮಾಣಿಕತೆ ಬಗೆಗೂ ಸಂಶಯ ಮೂಡುವಂತೆ ಮಾಡಿದ್ದಾರೆ.ಇದೇನು ಸಣ್ಣ ವಿಷಯವಲ್ಲ. ಸತ್ಯಂ ಸಂಸ್ಥೆಯು ಅಮೆರಿಕದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲೂ ಲಿಸ್ಟ್ ಆಗಿದೆಯಲ್ಲದೆ, ಜಗತ್ತಿನ 500 ಫಾರ್ಚೂನ್ ಕಂಪನಿಗಳಲ್ಲಿ ಸುಮಾರು 185ರಷ್ಟು ಸಂಸ್ಥೆಗಳು ಸತ್ಯಂನ ಗ್ರಾಹಕರು. ವಿಶ್ವಾದ್ಯಂತ ಸುಮಾರು 53 ಸಾವಿರ ಉದ್ಯೋಗಿಗಳ ದೊಡ್ಡ ಪಡೆಯೇ ಈ ಕಂಪನಿಗಿದೆ. ಸತ್ಯಂ ಕಳೆದ ವರ್ಷ ವಿತರಿಸಿದ ವೇತನದ ಒಟ್ಟು ಮೊತ್ತವೇ 5040 ಕೋಟಿ ರೂ. ಆಗಿದೆ ಎಂದರೆ, ಅದಕ್ಕಿಂತಲೂ ದೊಡ್ಡ ಮೊತ್ತದ (7000 ಕೋಟಿ ರೂ.) ಹಗರಣವೊಂದು ಕಾರ್ಪೊರೇಟ್ ಜಗತ್ತನ್ನು ನಡುಗಿಸಿದೆ, ವಿದೇಶೀ ಕಂಪನಿಗಳು ಭಾರತೀಯ ಕಂಪನಿಗಳ ಮೇಲೆಯೇ ಸಂಶಯ ಪಡುವಂತಾಗಿದೆ. ಇದೇ ಕಾರಣಕ್ಕೆ ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣ ಮೂರ್ತಿ ಕಳವಳ ವ್ಯಕ್ತಪಡಿಸಿರುವುದು : "ಭಾರತೀಯ ಕಾರ್ಪೊರೇಟ್ ಜಗತ್ತು ಪ್ರಾಮಾಣಿಕತೆ, ಹೊಣೆಗಾರಿಕೆ ಮುಂತಾದವನ್ನು ಜಗತ್ತಿಗೆ ಶ್ರುತಪಡಿಸಲು ಸಾಕಷ್ಟು ಶ್ರಮ ಪಡಬೇಕಾಗಿಬಂದಿದೆ"!ಸತ್ಯಂ ಬಾಯಿಬಿಟ್ಟ ಅಸತ್ಯದಿಂದಾಗಿ ಶೇರುದಾರರು ಒಂದೇ ದಿನದಲ್ಲಿ ಕಳೆದುಕೊಂಡ ಹಣ 9376 ಕೋಟಿ ರೂಪಾಯಿ! ಅಂದರೆ ಡಿಸೆಂಬರ್ 15ರಂದು 225 ರೂ. ಇದ್ದ ಅದರ ಶೇರು ಬೆಲೆ ಜನವರಿ 7ರಂದು ಶೇ.82ರಷ್ಟು ಕುಸಿತ ಕಂಡು 39 ರೂಪಾಯಿಗೆ ಇಳಿಯಿತು. ಈ ಒಂದೇ ದಿನದಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 749 ಅಂಶ ದಿಢೀರ್ ಕುಸಿತ ದಾಖಲಿಸಿ ಶೇರು ಮಾರುಕಟ್ಟೆ ಒಟ್ಟಾರೆ ಅನುಭವಿಸಿದ ನಷ್ಟದ ಪ್ರಮಾಣ 1.3 ಲಕ್ಷ ಕೋಟಿ!1977 ರಲ್ಲಿ ಓಹಿಯೋದಲ್ಲಿ ಎಂಬಿಎ ಮುಗಿಸಿ ಭಾರತಕ್ಕೆ ಬಂದಿದ್ದ ಬ್ಯಾರರಾಜು ರಾಮಲಿಂಗ ರಾಜು, ನೇಯ್ಗೆ ಉದ್ಯಮ, ಕಟ್ಟಡ ಉದ್ಯಮದ ನಂತರ 1987ರಲ್ಲಿ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಹುಟ್ಟುಹಾಕಿದ್ದರು. ಅದಾಗಲೇ ಕಂಪ್ಯೂಟರ್ ವಹಿವಾಟಿನಿಂದ ಬಂದ ಹಣವನ್ನೆಲ್ಲಾ ಹೈದರಾಬಾದಿನಲ್ಲಿ ಜಮೀನು ಖರೀದಿಸಿ ಒಟ್ಟುಹಾಕುವುದರಲ್ಲಿ ತೊಡಗಿಕೊಂಡರು. 1988ರಲ್ಲಿ ರಾಜು ಮತ್ತೊಂದು ಸಂಸ್ಥೆ ಮಾಯ್ತಸ್ (Satyam ಎಂಬುದನ್ನು ತಿರುಗಿಸಿ ಬರೆದರೆ Maytas) ಹುಟ್ಟು ಹಾಕಿದರು. 1999ರಲ್ಲಿ ವೈ2ಕೆ ಆತಂಕವಿನ್ನೂ ಚಾಲ್ತಿಯಲ್ಲಿರುವಾಗ ಸತ್ಯಂ, ಭಾರತದ ಪ್ರಧಾನ ಐಟಿ ಕಂಪನಿಯಾಗಿ ಗುರುತಿಸಲ್ಪಟ್ಟಿತು. ಸತ್ಯಂ ಚೀನಾ, ಸತ್ಯಂ ಜಪಾನ್, ಡಾ.ಮಿಲೇನಿಯಂ ಮತ್ತು ಸತ್ಯಂ ಇನ್ಫೋವೇ (ಸಿಫಿ) ಎಂಬ ಅಂಗಸಂಸ್ಥೆಗಳೂ ಹುಟ್ಟು ಪಡೆದವು.ರಾಜು ಅವರ ಭೂಮಿ ಖರೀದಿ ಪ್ರಕ್ರಿಯೆ ಮುಂದುವರಿದೇ ಇತ್ತು. ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜತೆಗೆ ಗೆಳೆತನ ಬೆಳೆಯಿತು. ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್‌ಗೆ, ಇವ ನಮ್ಮ ರಾಜ್ಯದ ಪ್ರಗತಿಯ ಮುಖ ಎಂದೇ ನಾಯ್ಡು ಪರಿಚಯ ಮಾಡಿಸಿಕೊಟ್ಟಿದ್ದರು. ಮುಂದಿನ 2-3 ವರ್ಷಗಳಲ್ಲಿ ನಾಯ್ಡು-ರಾಜು ಪರಸ್ಪರರನ್ನು ಪೋಷಿಸಿಕೊಳ್ಳತೊಡಗಿದರು. ರಾಜು ಅವರ ಬಳಿ ಇದ್ದ ಜಮೀನನ್ನು ಮುಟ್ಟುಗೋಲು ಹಾಕಿಕೊಂಡರೆ ತೆಲಂಗಣ ಪ್ರದೇಶದ ರೈತರಿಗೆ ವಿತರಿಸಲು ಬೇಕಾದಷ್ಟು ಜಮೀನು ಸಿಗುತ್ತದೆ ಎಂದು ನಕ್ಸಲರು ಕೂಡ ಅಂದೇ ಧ್ವನಿಯೆತ್ತಿದ್ದರು. ಯಾರೂ ಗಮನಿಸಲಿಲ್ಲ. ರಾಜು ಐಟಿ ದೊರೆಯಾಗಿ ಹೆಸರು ಮಾಡತೊಡಗಿದರು.2004 ರಲ್ಲಿ ಕಾಂಗ್ರೆಸ್‌ನ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾದಾಗ, ರಾಜು ಅವರು ರೆಡ್ಡಿ ಜತೆಗೂ ಸಖ್ಯ ಬೆಳೆಸಿದರು. ವಾಸ್ತವವಾಗಿ ನಾಯ್ಡು ಆತ್ಮೀಯರನ್ನು ಬಳಿಗೆ ಸೇರಿಸಿಕೊಳ್ಳದ ರೆಡ್ಡಿ, ರಾಜು ಅವರಿಂದ ಭಾರೀ 'ಉಡುಗೊರೆ' ಪಡೆದು ಗೆಳೆತನ ಬೆಳೆಸಿಕೊಂಡರು ಎಂಬ ಆರೋಪಗಳೂ ಇವೆ. ಆದರೆ, ಹೈದರಾಬಾದ್ ಸುತ್ತಮುತ್ತ ಸ್ಥಿರಾಸ್ಥಿ ವಹಿವಾಟು ಬೆಳೆಸುವ ಮುಖ್ಯಮಂತ್ರಿ ರೆಡ್ಡಿ ಅವರ ಕಾರ್ಯವೈಖರಿಯು ರಾಜು ಅವರ ಮೇತಾಸ್‌ಗೆ ಸೂಕ್ತವಾಗಿಯೇ ಇತ್ತು. ಜಮೀನು ಬೆಲೆ ಅದರ ಜತೆಗೆ ರಾಜುವಿನ ಸಂಪತ್ತು ಕೂಡ ಗಗನಕ್ಕೇರತೊಡಗಿತು.ಅದಾಗಲೇ ಸಾಕಷ್ಟು ಸಂಪತ್ತು ಒಟ್ಟುಗೂಡಿಸಿದ್ದ ರಾಜು, ಸತ್ಯಂ ಅನ್ನು ಮಾರಾಟ ಮಾಡಿ, ಮೇತಾಸ್ ಅನ್ನು ತನ್ನ ಫುಲ್‌ಟೈಮ್ ಕಂಪನಿಯಾಗಿ ಪರಿವರ್ತಿಸಲು ಹವಣಿಸುತ್ತಿದ್ದರು. ಕಳೆದ ಜುಲೈ ತಿಂಗಳಲ್ಲಿ ಹೈದರಾಬಾದಿನಲ್ಲಿ ಮೆಟ್ರೋ ರೈಲು ಯೋಜನೆಯು ಮೇತಾಸ್ ಬಗಲಿಗೆ ಬಿದ್ದಾಗ, ರಾಜು ಉತ್ತೇಜಿತರಾದರು. ಇದರ ಬಿಡ್ಡಿಂಗ್‌ನಲ್ಲಿಯೂ ಮೋಸ ನಡೆದಿದೆ ಎಂಬ ಆರೋಪಗಳೆದ್ದಿದ್ದವು. ಯಾವಾಗ ಜಾಗತಿಕ ಹಣಕಾಸು ಬಿಕ್ಕಟ್ಟು ಕಾಡಿತೋ, ಆಗ ಜಮೀನಿನ ಬೆಲೆಗಳು ಇಳಿಮುಖವಾಗತೊಡಗಿದವು. ಅದಕ್ಕೆ ಅನುಗುಣವಾಗಿ, ಸುಮಾರು 800 ರೂಪಾಯಿಯಷ್ಟಿದ್ದ ತಲಾ ಶೇರು ಬೆಲೆಯು ಗಣನೀಯವಾಗಿ ಕುಸಿಯಿತು. ಜಮೀನು ಬೆಲೆ ಕುಸಿದಾಗ ರಾಜು ಕಳವಳಗೊಂಡರು. ಒಂದೆಡೆ, ಕಾಗದಪತ್ರಗಳಲ್ಲಿ ನಮೂದಿಸಿರುವ ಮತ್ತು ವಾಸ್ತವವಾಗಿ ಇರುವ ಲಾಭಾಂಶ ವ್ಯತ್ಯಾಸ ಏರುತ್ತಲೇ ಹೋಯಿತು. ತಮ್ಮದೇ ಕುಟುಂಬದ ಒಡೆತನದ ಮೇತಾಸ್ ಪ್ರಾಪರ್ಟೀಸ್ ಮತ್ತು ಮೇತಾಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗಳನ್ನು ಖರೀದಿಸುವ ಪ್ರಸ್ತಾಪ ಮುಂದಿಟ್ಟರು. ಶೇರುದಾರರು ವಿರೋಧಿಸಿದರು. ಕೊನೆಯ ಪ್ರಯತ್ನವೂ ಕೈಕೊಟ್ಟಾಗ, ಸತ್ಯ ಬಾಯ್ಬಿಟ್ಟರು.ಹಾಗೆ ನೋಡಿದರೆ ಹಗರಣಗಳು, ಮೋಸ-ವಂಚನೆ ಪ್ರಕರಣಗಳು ಭಾರತೀಯ ರಾಜಕಾರಣಿಗಳ ಕೃಪಾಕಟಾಕ್ಷದಡಿಯೇ ನಡೆಯುತ್ತಿರುವುದು ಭಾರತೀಯರಿಗೇನೂ ಹೊಸದಲ್ಲ. 90ರ ದಶಕದಲ್ಲಿ ಹರ್ಷದ್ ಮೆಹ್ತಾ ಎಂಬ ಗೂಳಿ ಇಡೀ ಶೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದರೆ, ಆ ಬಳಿಕ ಕೇತನ್ ಪಾರೀಖ್, ಐಪಿಒ ವಂಚನಾ ಪ್ರಕರಣಗಳು ಬಯಲಾಗಿದ್ದವು. ಆದರೆ ಈ ಬಾರಿಯ ಪ್ರಕರಣ ಮಾತ್ರ ವಿಶಿಷ್ಟವಾದುದು. ಇದು ಸತ್ಯಂನ ಅಸ್ತಿತ್ವಕ್ಕೆ ಕೊಡಲಿಯಾಗಿದ್ದು ಮಾತ್ರವೇ ಅಲ್ಲ, ಭಾರತೀಯ ಕಾರ್ಪೊರೇಟ್ ಗವರ್ನೆನ್ಸ್ ಮೇಲೆಯೇ ಕಪ್ಪು ಚುಕ್ಕೆ. ಭಾರತೀಯ ಕಂಪನಿಗಳೆಲ್ಲವೂ ಇದೇ ರೀತಿ ಅಪ್ರಾಮಾಣಿಕವಾಗಿಯೇ ಇರುತ್ತವೆಯೇ ಎಂಬ ಸಂದೇಹ ಜಾಗತಿಕ ವಲಯದಲ್ಲಿ ಮೂಡಿದೆ. ಇದು ದೇಶದ ಪ್ರಾಮಾಣಿಕತೆಯ ಪ್ರಶ್ನೆಯಾಗಿಯೂ ಪರಿಣಮಿಸಿದೆ. ಭಾರತೀಯ ಕಂಪನಿಗಳಲ್ಲಿ ಕಾರ್ಪೊರೇಟ್ ಗವರ್ನೆನ್ಸ್ ಯಾವ ರೀತಿ ಇರುತ್ತದೆ ಎಂಬುದರ ಸೂಚಕವಾಗಿದೆ.2008 ರಲ್ಲಿ ಕಾರ್ಪೊರೇಟ್ ಆಡಳಿತಕ್ಕಾಗಿ ನೀಡಲಾಗುವ ಜಾಗತಿಕವಾಗಿ ಶ್ರೇಷ್ಠ ಪ್ರಶಸ್ತಿ 'ಸ್ವರ್ಣ ಮಯೂರ' ದಕ್ಕಿಸಿಕೊಂಡ ಮತ್ತು 2002ರಲ್ಲಿಯೂ ಇದೇ 'ಚಿನ್ನದ ನವಿಲು' (ಸ್ವರ್ಣಮಯೂರ) ಪ್ರಶಸ್ತಿ ದಕ್ಕಿಸಿಕೊಂಡಿದ್ದ ಸತ್ಯಂ ಕಂಪ್ಯೂಟರ್ಸ್ ಇದೀಗ ಕಾಗದದ ಹುಲಿಯಾಗಿ ಎಲ್ಲರೆದುರು ಪತನಗೊಂಡಿದೆ. ಈಗಾಗಲೇ ವಿಶ್ವಬ್ಯಾಂಕು ಸತ್ಯಂಗೆ 8 ವರ್ಷಗಳ ಕಾಲ ನಿಷೇಧ ಹೇರಿದ್ದರೆ, ಸ್ವರ್ಣಮಯೂರ ಪ್ರಶಸ್ತಿಯನ್ನೂ ಮರಳಿ ಸೆಳೆದುಕೊಳ್ಳುವ ಬಗ್ಗೆ ಸಭೆ ನಡೆಯುತ್ತಿದೆ.ಇಡೀ ಜಗತ್ತೇ ಹಣಕಾಸು ಬಿಕ್ಕಟ್ಟಿನಿಂದಾಗಿ ಎದ್ದೇಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಹಂತದಲ್ಲಿ ಬಯಲಾಗಿರುವ ದೇಶದ ಅತಿದೊಡ್ಡ ಮೋಸ ಪ್ರಕರಣವು, ಭಾರತೀಯ ಆರ್ಥಿಕತೆಯ ಮೇಲೆ ಬೀರಿದ, ಬೀರುವ ಪರಿಣಾಮ ಊಹೆಗೂ ನಿಲುಕದ್ದು. ಕಾನೂನು ತನ್ನದೇ ಕ್ರಮ ಕೈಗೊಳ್ಳುತ್ತದೆಯಾದರೂ, ಇದು ಐಟಿ-ಬಿಪಿಒ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ. |