ವಿಶ್ವದಲ್ಲೇ ಪ್ರಜಾಪ್ರಭುತ್ವದಲ್ಲಿ ಪಂಚಾಯತ್ ರಾಜ್ ಒಂದು 'ಮಹಾನ್ ಪ್ರಯೋಗ' ಎಂದು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ. ಅವರು ಭಾರತದಲ್ಲಿ ಸಾರ್ವಜನಿಕ ಆಡಳಿತ ವಿಚಾರವಾಗಿ ಕಝಕಿಸ್ತಾನದ ರಾಜಧಾನಿಯಲ್ಲಿ ಸಾರ್ವಜನಿಕ ಆಡಳಿತ ಅಕಾಡೆಮಿಯಲ್ಲಿ ಮಾತನಾಡುತ್ತಿದ್ದರು.
ಇಂತಹ ಮಹಾನ್ ಪ್ರಯೋಗವನ್ನು ಇತಿಹಾಸದಲ್ಲಿ ಇದುವರೆಗೆ ವಿಶ್ವದ ಯಾವುದೇ ಭಾಗದಲ್ಲಿ, ಯಾವಾಗಲಾದರು ಅನುಸರಿಸಿದ ಉದಾಹರಣೆ ಇಲ್ಲ ಎಂದು ನುಡಿದ ಅವರು, ಏಷ್ಯಾದ ಉದಯೋನ್ಮುಖ ಪ್ರಜಾಪ್ರಭುತ್ವಗಳು ಇಂತಹ ಅಧಿಕಾರ ವಿಕೇಂದ್ರೀಕರಣದ ಮೂಲಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಸಲಹೆ ಮಾಡಿದ್ದಾರೆ.
ಅಧಿಕಾರ ವಿಕೇಂದ್ರೀಕರಣದ ಪಂಚಾಯತ್ ರಾಜ್ ವ್ಯವಸ್ಥೆಯಿಂದಾಗಿ, 2,40,000 ತಳಮಟ್ಟದ ಸಂಸ್ಥೆಗಳಲ್ಲಿ ಗ್ರಾಮ ಮತ್ತು ನಗರ ಮಟ್ಟದಲ್ಲಿ 3.6 ದಶಲಕ್ಷ ಚುನಾಯಿತ ಸದಸ್ಯರಿದ್ದಾರೆ. ಇವರಲ್ಲಿ ಶೇ.37 ಅಥವಾ ಒಂದು ದಶಲಕ್ಷದಷ್ಟು ಮಹಿಳಾ ಪ್ರತಿನಿಧಿಗಳಿದ್ದಾರೆ ಎಂದು ನುಡಿದರು.
ಭಾರತದಲ್ಲಿ ಸಾರ್ವಜನಿಕ ಆಡಳಿತ ಕುರಿತು ಮಾತನಾಡಿದ ಉಪರಾಷ್ಟ್ರಪತಿಗಳು, ಪಂಚಾಯತ್ ರಾಜ್ ವ್ಯವಸ್ಥೆಯು, ಜನತೆಯ ಪಾಲ್ಗೊಳ್ಳುವಿಕೆಯ ಆಡಳಿತ ಮತ್ತು ವಿಸ್ತೃತ ಆಧಾರದ ಯೋಜನೆ ಹಾಗೂ, ಆರ್ಥಿಕ ಅಭಿವೃದ್ದಿ ಮತ್ತು ಸಾಮಾಜಿಕ ನ್ಯಾಯ ಕಾರ್ಯಕ್ರಮಗಳ ಜಾರಿಯನ್ನು ಖಚಿತಪಡಿಸಿದೆ ಎಂದು ನುಡಿದರು.
ಸ್ವಾತಂತ್ರ್ಯಾ ನಂತರ ಭಾರತದ ಪ್ರಯೋಗಶೀಲತೆಯನ್ನು ವಿವರಿಸಿದ ಅನ್ಸಾರಿಯವರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಮತ್ತು ಮಾಹಿತಿ ಹಕ್ಕು ಕಾಯ್ದೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
|