ಪಾಕಿಸ್ತಾನದಲ್ಲಿ ನೂತನ ಚುನಾಯಿತ ಸರಕಾರ ಅಸ್ತಿತ್ವಕ್ಕೆ ಬಂದ ಕಾರಣ, ಸ್ಥಗಿತಗೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಮಾತುಕತೆಗಳು ಮೇ 20 ರಿಂದ ಪುನಃ ಪ್ರಾರಂಭವಾಗಲಿದ್ದು ನಂತರ ವಿದೇಶಾಂಗ ಸಚಿವರುಗಳ ಮಟ್ಟದಲ್ಲಿ ಮಾತುಕತೆ ಮುಂದುವರಿಯಲಿವೆ.
ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ಪಾಕ್ ವಿದೇಶಾಂಗ ಕಾರ್ಯದರ್ಶಿ ರಿಯಾಜ್ ಮಹ್ಮದ್ ಖಾನ್ ಅವರೊಂದಿಗೆ ಮಾತುಕತೆ ಮುಂದುವರಿಸುವ ನಿಟ್ಟಿನಲ್ಲಿ ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ.
ಎರಡು ದಿನಗಳ ನಂತರ ಬಾರತೀಯ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮತ್ತು ಶಾಹ್ ಮಹ್ಮೂದ್ ಖುರೇಷಿ ನಡುವೆ ಕಾರ್ಯದರ್ಶಿಗಳ ಮಟ್ಟದಲ್ಲಿ ನಡೆದ ಮಾತುಕತೆಗಳ ಪರಿಶೀಲನೆ ನಡೆಯಲಿದೆ.
2004ರಲ್ಲಿ ಪ್ರಾರಂಭವಾದ ಸಮಗ್ರ ದ್ವಿಪಕ್ಷೀಯ ಮಟ್ಟದ ಮಾತುಕತೆಯು ಗಮನಾರ್ಹ ಪ್ರಗತಿ ಸಾಧಿಸಿದೆ. ಪಾಕಿಸ್ತಾನದಲ್ಲಿ ಉಂಟಾದ ಅರಾಜಕೀಯ ಪರಿಸ್ಥಿತಿಯ ಕಾರಣ ಕೆಲವು ತಿಂಗಳುಗಳ ಕಾಲ ದ್ವಿಪಕ್ಷೀಯ ಮಾತುಕತೆ ಸ್ಥಗಿತಗೊಂಡಿತ್ತು. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಡೆದ ನಾಲ್ಕನೆ ಸುತ್ತಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಎಂಟು ವಿಷಯಗಳಲ್ಲಿ ಸಹಮತಕ್ಕೆ ಬರಲಾಗಿದೆ.
|