ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಅನಪೇಕ್ಷಿತ ವ್ಯಕ್ತಿಯೆಂದು ಘೋಷಿಸಿ ಬ್ರಿಟನ್‌ಗೆ ಪ್ರವೇಶಿಸಲು ವೀಸಾ ನಿರಾಕರಿಸುವಂತೆ ಬ್ರಿಟನ್ನಿನ ಭಾರತೀಯ ಮುಸ್ಲಿಮರು ಬ್ರಿಟನ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
2002ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ರಾಜ್ಯದಲ್ಲಿ ಮುಸ್ಲಿಮರ ನರಮೇಧ ನಡೆಸಿದ ಮೋದಿ, ಮುಸ್ಲಿಮ್ ಜನಾಂಗವನ್ನು ಅಳಿಸಿಹಾಕಲು ಹುನ್ನಾರ ನಡೆಸಿದ್ದರೆಂದು ಬ್ರಿಟನ್ ಭಾರತೀಯ ಮುಸ್ಲಿಂ ಮಂಡಳಿ ಆರೋಪಿಸಿದೆ.
ಲಂಡನ್‌ನಲ್ಲಿ ಈ ವರ್ಷದ ಮೇನಲ್ಲಿ ಡೋವ್ ಜೋನ್ಸ್ ಫೈನಾನ್ಸಿಯಲ್ ನ್ಯೂಸ್ ಆಯೋಜಿಸಿದ 'ಇಂಡಿಯ ಸಮ್ಮಿತ್ 2009'ನ್ನು ಉದ್ದೇಶಿಸಿ ಮಾತನಾಡಲು ಮೋದಿ ಅವರಿಗೆ ಆಹ್ವಾನಿಸಲಾಗಿದೆ. ಬ್ರಿಟನ್ ಗೃಹಕಾರ್ಯದರ್ಶಿ ಜಾಕ್ವಿ ಸ್ಮಿತ್‌ಗೆ ಪತ್ರ ಬರೆದಿರುವ ಭಾರತೀಯ ಮುಸ್ಲಿಮರ ಮಂಡಳಿ ಅಧ್ಯಕ್ಷ ಕೆ.ಮೊಹಮದ್ ಮುನಾಫ್ ಜೀನಾ,'ಮೋದಿ ಗುಜರಾತ್ ನರಮೇಧಕ್ಕೆ ಹೊಣೆಗಾರರಾಗಿದ್ದು, ಬ್ರಿಟನ್‌ನಲ್ಲಿ ಅಂತರ-ಕೋಮು ಸಂಬಂಧಗಳಿಗೆ ಅಪಾಯ ಒಡ್ಡಿದ್ದಾರೆಂದು' ಆರೋಪಿಸಿದ್ದಾರೆ.
2005ರಲ್ಲಿ ಅಮೆರಿಕವು ಮೋದಿ ವೀಸಾ ರದ್ದು ಮಾಡಿದ್ದನ್ನು ಪತ್ರದಲ್ಲಿ ಉದಾಹರಿಸಲಾಗಿದ್ದು,2005ರಲ್ಲಿ ಅಮೆರಿಕದ ಉದಾಹರಣೆಯನ್ನು ಅನುಸರಿಸಿ, ಮೋದಿ ಲಂಡನ್ ಪ್ರವಾಸ ರದ್ದುಮಾಡುವಂತೆ ಭಾರತ ಸರ್ಕಾರಕ್ಕೆ ಬ್ರಿಟನ್ ಸರ್ಕಾರ ಕೂಡ ಸಲಹೆ ಮಾಡಿದೆಯೆಂದು ತಾವು ನಂಬುವುದಾಗಿ ಪತ್ರದಲ್ಲಿ ಹೇಳಲಾಗಿದೆ. |