ಇಂಡೋ-ಪಾಕ್ ಗಡಿ ನುಸುಳಿದ್ದಕ್ಕಾಗಿ 34 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬ, ಅನಿಶ್ಚಿತ ಭವಿಷ್ಯದೊಂದಿಗೆ ತನ್ನ ತವರೂರಾದ ಉತ್ತರ ಪ್ರದೇಶಕ್ಕೆ ಹೊರಟಿದ್ದಾನೆ.
ಭಾರತ-ಪಾಕಿಸ್ತಾನದ ಗಡಿಯಲ್ಲಿ ನುಸುಳಿದ್ದ ಪ್ರಭುನಾಥ್ ಎಂಬಾತನನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿತ್ತು.
ಹೆಚ್ಚುವರಿ ಮುಖ್ಯ ನ್ಯಾಯಾಧೀಶ(ಶ್ರೀಕರಣ್‌ಪುರ), ರಾಕೇಶ್ ಶರ್ಮಾ ಅವರು ಮಾನಸಿಕ ಅಸ್ವಸ್ಥ ಖೈದಿ ಪ್ರಭುನಾಥ್‌ನನ್ನು ತತ್‌ಕ್ಷಣ ಬಿಡುಗಡೆ ಮಾಡುವಂತೆ ಆದೇಶ ನೀಡಿದರು ಮತ್ತು ಆತನನ್ನು ಉತ್ತರ ಪ್ರದೇಶದ ಆತನ ಊರಿಗೆ ತಲುಪಿಸಬೇಕೆಂದು ತಿಳಿಸಿದರು. ಪೊಲೀಸರು ಆತನನ್ನು ಮರುಧರ್ ಎಕ್ಸ್‌ಪ್ರೆಸ್ ಮೂಲಕ ಆತನ ಊರಿಗೆ ಕರೆದೊಯ್ದರು. ಆದರೆ ಅಲ್ಲಿಗೆ ಈ ಕಥೆ ಕೊನೆಗೊಳ್ಳಲಿಲ್ಲ. ಪ್ರಭುನಾಥ್‌ನನ್ನು ಗುರುತಿಸುವವರೇ ಆ ಊರಿನಲ್ಲಿ ಇರಲಿಲ್ಲ.
ಆತ ಜೈಲಿನಲ್ಲಿ ಇರುವಾಗ ಯಾರೂ ಸಹ ಆತನನ್ನು ಭೇಟಿ ಮಾಡಲು ಬರುತ್ತಿರಲಿಲ್ಲ. ಇದು ಆತನ ಮೂಲವನ್ನು ಹುಡುಕಲು ತೊಡಕಾಗಿದೆ. ಪೊಲೀಸರಿಗೆ ಆತನ ಯಾವುದೇ ಬಂಧುಗಳು ದೊರೆಯದಿದ್ದರೆ, ಪ್ರಭುನಾಥನನ್ನು ಮಾನಸಿಕ ಚಿಕಿತ್ಸೆಗಾಗಿ ಜೈಪುರದಲ್ಲಿರುವ ಮಾನಸಿಕ ಆಸ್ಪತ್ರೆಗೇ ಕರೆತರಬೇಕಾಗುತ್ತದೆ ಎಂದು ಜೈಲು ವಿಭಾಗದ ಐಜಿ ಎಸ್.ಪಿ.ಖಡ್ಕಾವತ್ ತಿಳಿಸಿದ್ದಾರೆ.
ಪ್ರಭುನಾಥನನ್ನು 1974ರ ಮೇ 14ರಂದು ರಾಜಸ್ಥಾನದ ಶ್ರೀಗಂಗಾ ನಗರದ ಜಿಲ್ಲೆಯ ಶ್ರೀಕರಣ್‌ಪುರದಲ್ಲಿ ಗಡಿ ನುಸುಳುವಿಕೆ ಕಾರಣದಿಂದ ಬಂಧಿಸಲಾಗಿತ್ತು. ನಾಲ್ಕು ದಿನಗಳ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಆತನ ವಿರುದ್ಧ ಔಪಚಾರಿಕ ಕೇಸು ದಾಖಲಿಸುವಲ್ಲಿ ಪೊಲೀಸರು ಆರಂಭದಲ್ಲಿ ವಿಫಲರಾಗಿದ್ದರು. ಆದರೆ ಅಂತಿಮ ವರದಿಯಲ್ಲಿ, ಆತ ಯಾವುದೇ ಅಪರಾಧ ಎಸಗಿಲ್ಲ ಎಂದು ನಮೂದಿಸಿದ್ದರು.
|