'ಎಲ್ಲಾ 'ಹೊಗೆ' ಉನ್ನತ ರಾಜಕಾರಣಿಗಳೇ ಕಾರಣ, ಕೊನೆಯಲ್ಲಿ ಇದರಿಂದ ನರಳಬೇಕಾಗಿರುವುದು ಜನಸಾಮಾನ್ಯರು, ಇದೇನೂ ರಾಜಕೀಯ ಭಾಷಣ ಅಲ್ಲ, ಮನಸ್ಸಿನಲ್ಲೇನಿದೆ ಅದನ್ನು ಹೇಳಿಬಿಟ್ಟಿದ್ದೇನೆ'.
ಈ ರೀತಿ ನುಡಿದವರು ಬಹುತೇಕವಾಗಿ ಬಲವಂತವಾಗಿ ಎಂಬಂತೆ ತಮಿಳು ಚಿತ್ರೋದ್ಯಮವು ನಡೆಸಿದ ಪ್ರತಿಭಟನಾ ಸಭೆ/ಉಪವಾಸ ಸತ್ಯಾಗ್ರಹದಲ್ಲಿ ಗುರುವಾರ ಭಾಗವಹಿಸಿದ ತಮಿಳು ಸೂಪರ್ ಸ್ಟಾರ್ ರಜನೀಕಾಂತ್.
ಮೂಲತಃ ಕನ್ನಡಿಗರಾಗಿರುವ ಅವರು, ದಕ್ಷಿಣ ಭಾರತ ಚಿತ್ರೋದ್ಯಮದ ಮಂದಿ ಚೆನ್ನೈಯಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡುತ್ತಾ, ಶಾಂತಿ ಕಾಪಾಡುವಂತೆ, ಹಿಂಸೆ ತೊರೆಯುವಂತೆ ಜನತೆಗೆ ಮನವಿ ಮಾಡಿಕೊಂಡರು.
ಇಡೀ ವಿಷಯದಿಂದ ಭ್ರಮನಿರಸನವಾಗಿದೆ. ನಮ್ಮ ಮಾತನ್ನು ಯಾರು ಕೇಳುತ್ತಾರೆ? ಇಲ್ಲ, ಸರಕಾರವೂ ಕೇಳುತ್ತಿಲ್ಲ. ಇಡೀ ವಿವಾದ ಎಬ್ಬಿಸಿದ್ದು ರಾಜಕಾರಣಿಗಳು. ಜನಸಾಮಾನ್ಯರು ತೊಂದರೆಗೀಡಾಗಬೇಕಿದೆ. ಇದಕ್ಕೆಲ್ಲಾ ಮುಂಬರುವ ಚುನಾವಣೆಗಳೇ ಕಾರಣ. ದಶಕಗಳ ಕಾಲದಿಂದ ಎರಡೂ ರಾಜ್ಯಗಳ ಮಧ್ಯೆ ಜಲ ವಿವಾದ ಇದೆ. ನಮ್ಮ ರಾಜ್ಯಕ್ಕೆ ಭಾರೀ ತೊಂದರೆ ನೀಡುತ್ತಿರುವ ಸಂಗತಿಯೂ ಇದೇ. ನಮಗೆ ಇದಕ್ಕಿಂತ ಮಹತ್ವದ ವಿಷಯ ಬೇರಾವುದಿದೆ ಎಂದು ರಜನಿಕಾಂತ್ ಪ್ರಶ್ನಿಸಿದರು.
ದಕ್ಷಿಣ ಭಾರತದ ಚಿತ್ರ ತಾರೆಗಳಾದ ಖುಷ್ಬೂ, ಮಾಧವನ್, ಪ್ರಭು, ವಿಜಯ್, ಸೂರ್ಯ, ಸ್ನೇಹಾ ಮುಂತಾದವರೆಲ್ಲರೂ ಮಾತನಾಡಿ, ಪ್ರತಿ ಬಾರಿ ಇಂಥದ್ದೊಂದು ವಿವಾದ ಎದುರಾದಾಗ ತಮಿಳು ಚಿತ್ರರಂಗದ ಮೇಲೆ ದೌರ್ಜನ್ಯ ನಡೆಸಲಾಗುತ್ತದೆ. ತಮಿಳು ಚಿತ್ರಗಳಿಗೆ ತಡೆಯೊಡ್ಡಲಾಗುತ್ತದೆ, ತಮಿಳು ಜನರ ಮೇಲೆ ದೌರ್ಜನ್ಯ ನಡೆಯುತ್ತದೆ. ಏನೂ ಮಾಡದಿರುವ ನಮಗೇಕೆ ಈ ಸ್ಥಿತಿ ಎಂದು ಪ್ರಶ್ನಿಸಿದರು.
ಈ ಹಿಂಸಾಚಾರ ನಿಲ್ಲಬೇಕು, ವಿವಾದ ಸುಖಾಂತ್ಯವಾಗಬೇಕು ಎಂಬುದು ಎಲ್ಲರ ಆಶಯವಾಗಿತ್ತು. ಬಹುತೇಕ ಮಂದಿ ನಟರು ಮಾತಿನಲ್ಲಿ ಪ್ರಬುದ್ಧತೆ ಮೆರೆದಿದ್ದರೆ, ಕೆಲವರು ಮಾತ್ರ, ಅಸಂಬದ್ಧ ಮಾತುಗಳನ್ನಾಡಿದರು.
|