ನವದೆಹಲಿ: ಬಿಎಂಡಬ್ಲ್ಯು ಹಿಟ್ ಆಂಡ್ ರನ್ ಪ್ರಕರಣದ ಪ್ರಧಾನ ಆರೋಪಿ ಸಂಜೀವ್ ನಂದಾಗೆ ದೆಹಲಿಯ ನ್ಯಾಯಾಲಯ ಶುಕ್ರವಾರ ಐದು ವರ್ಷಗಳ ಶಿಕ್ಷೆ ವಿಧಿಸಿದೆ.
ಸಹ ಅಪರಾಧಿಗಳಾಗಿರುವ ರಾಜೀವ ಗುಪ್ತಾನಿಗೆ ಒಂದು ವರ್ಷ ಮತ್ತು ಇನ್ನೊರ್ವ ಭೋಲಾ ಶ್ಯಾಮ್‌ಗೆ ಆರು ತಿಂಗಳ ಶಿಕ್ಷೆ ವಿಧಿಸಲಾಗಿದೆ. ನಂದಾ ಇದೀಗಾಗಲೇ ಒಂಭತ್ತು ತಿಂಗಳ ಕಾಲ ಜೈಲುವಾಸ ಮಾಡಿದ್ದು, ಐದು ವರ್ಷಗಳ ಶಿಕ್ಷೆಯಿಂದ ಈ ಅವಧಿಯನ್ನು ಕಡಿಮೆಗೊಳಿಸಲಾಗುವುದು.
1999ರ ಜನವರಿಯಲ್ಲಿ ಈ ಪ್ರಕರಣ ಸಂಭವಿಸಿದ್ದು, ಒಂಭತ್ತೂವರೆ ವರ್ಷಗಳ ಕಾಲದ ಸುದೀರ್ಘ ಅವಧಿಯ ವಿಚಾರಣೆಯ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ.
ನಂದಾ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಹರಿದು ಲೋಧಿ ಕಾಲನಿ ಪ್ರದೇಶದಲ್ಲಿ ಮೂವರು ಪೊಲೀಸರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು. ಸೆಕ್ಷನ್ 304(2)ರನ್ವಯ, ಹೆಚ್ಚುವರಿ ಸತ್ರ ನ್ಯಾಯಾಧೀಶ ವಿನೋದ್ ಕುಮಾರ್, ನಂದಾ ಶಿಕ್ಷಾರ್ಹ ನರಹತ್ಯೆ ಅಪರಾಧ ಎಸಗಿರುವುದಾಗಿ ತೀರ್ಪಿತ್ತಿದ್ದರು.
ಸರಕಾರಿ ವಕೀಲರು ನಂದಾಗೆ 10 ವರ್ಷಗಳ ಗರಿಷ್ಠ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು. ಸೆಪ್ಟಂಬರ್ ಎರಡರಂದು ನ್ಯಾಯಾಲಯವು ನಂದಾ ದೋಷಿ ಎಂದು ತೀರ್ಪು ನೀಡಿದ್ದು ಶುಕ್ರವಾರ ಶಿಕ್ಷೆಯ ಪ್ರಮಾಣ ಘೋಷಿಸಿದೆ.
ಈ ಪ್ರಕರಣವು ಸಾಕಷ್ಟು ಸುದ್ದಿಮಾಡಿದ್ದು, ನಂದಾ ಪರ ವಕೀಲರು ಮತ್ತು ಸರಕಾರಿ ವಕೀಲರು ಸಾಕ್ಷಿಯ ಮೇಲೆ ಪ್ರಭಾವ ಬೀರಲು ಯತ್ನಸಿದ್ದು, ಇಬ್ಬರ ಹಿರಿಯ ವಕೀಲರಾದ ಆರ್.ಕೆ.ಆನಂದ್ ಮತ್ತು ಐ.ಯು.ಖಾನ್ ಅವರುಗಳು ದೆಹಲಿ ಹೈಕೋರ್ಟ್ ಮತ್ತು ಆಧೀನ ನ್ಯಾಯಾಲಯಗಳಲ್ಲಿ ನಾಲ್ಕು ತಿಂಗಳ ನಿಷೇಧ ಹೇರಲಾಗಿದೆ.
|