ಬಿಹಾರದಿಂದ ಪ್ರವಾಹ ತಗ್ಗುತ್ತಿರುವ ಸಮಾಧಾನಕರ ಸುದ್ದಿ ಕೇಳಿಬರುತ್ತಿದೆಯಾದರೂ, ಅಸ್ಸಾಂನಲ್ಲಿ ಪ್ರವಾಹಸ್ಥಿತಿ ಮುಂದುವರಿದಿದ್ದು, ಸುಮಾರು 12 ಲಕ್ಷ ಮಂದಿ ಪ್ರವಾಹ ಪೀಡಿತರಾಗಿದ್ದಾರೆ. ಇದುವರೆಗೆ ಪ್ರವಾಹದಿಂದಾಗಿ 17 ಮಂದಿ ಸಾವಿಗೀಡಾಗಿದ್ದಾರೆ.
ಬಿಹಾರದಲ್ಲಿ ಹಿಂದೆಂದೂ ಸಂಭವಿಸಿರದಂತಹ ಪರಿಸ್ಥಿತಿ ಉದ್ಭವವಾಗಿದ್ದರೆ, ಅಸ್ಸಾಮಿನ ಪರಿಸ್ಥಿತಿಯೂ ಸಹ ಚಿಂತಾಜನಕವಾಗಿದೆ. ಈಶಾನ್ಯ ರಾಜ್ಯಗಳು ಮತ್ತು ರಾಷ್ಟ್ರದ ಇತರ ಪ್ರದೇಶಗಳ ಪ್ರಮುಖ ರಸ್ತೆ ಸಂಪರ್ಕವಾಗಿರುವ ರಾಷ್ಟ್ರೀಯ ಹೆದ್ದಾರಿ 31 ಕಳೆದ ಭಾನುವಾರ ಪ್ರವಾಹದಿಂದಾಗಿ ಮುಚ್ಚುಗಡೆಯಾಗಿದೆ.
ರಾಜ್ಯದ ಹಲವಾರು ಭಾಗಗಳು ಪ್ರವಾಹ ಪ್ರಕೋಪದಿಂದ ಬಳಲಿವೆ. ಈ ಹಿಂದೆಯೂ ಪ್ರವಾಹದ ಅನುಭವ ಇರುವ ಜನತೆಗೆ ಪ್ರವಾಹದೊಂದಿಗೆ ಹೇಗೆ ಬದುಕಬೇಕು ಎಂಬುದು ತಿಳಿದಿದೆ. ತಮ್ಮನ್ನು ತಾವು ನದಿಯ ಮಕ್ಕಳು ಎಂದು ಕರೆದುಕೊಳ್ಳುತ್ತಿರುವ ಅವರು ತಾವು ಪ್ರವಾಹದೊಂದಿಗೆ ಬೆಳೆದಿದ್ದು, ಇದರೊಂದಿಗೆ ಹೇಗೆ ಜೀವಿಸಬೇಕು ಎಂದು ತಮಗೆ ತಿಳಿದಿದೆ ಎಂದು ಹೇಳಿಕೊಳ್ಳುತ್ತಾರೆ.
ಅತ್ಯಂತ ವಿಧ್ವಂಸಕಾರಿಯಾದ ಮೂರನೇ ಪ್ರವಾಹ ಇದಾಗಿದೆ. ಮಜೌಲಿ ನದಿ ದ್ವೀಪವು ಅತ್ಯಂತ ಹೆಚ್ಚು ಹಾನಿಗೀಡಾಗಿದೆ. ರಾಜ್ಯದ ಸುಮಾರು 18 ಜಿಲ್ಲೆಗಳು ಪ್ರವಾಹ ಸಂಕಷ್ಟಕ್ಕೆ ಸಿಲುಕಿವೆ. ಅಸ್ಸಾಮಿನ ವಿಕೋಪ ನಿರ್ವಹಣಾ ಕ್ರಮಗಳು ಏನೇನೂ ಸಾಲುತ್ತಿಲ್ಲ. ಅರ್ಹ ಮಂದಿಗೆ ಪರಿಹಾರ ಕಾರ್ಯಗಳು ತಲುಪುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಮಹಿಳೆಯೊಬ್ಬರು ಹೇಳುವ ಪ್ರಕಾರ, ತನ್ನ ಹನ್ನೊಂದು ಸದಸ್ಯರ ಕುಟುಂಬವನ್ನು ಆಕೆಯೊಬ್ಬರೆ ಸರಕಾರದ ಸಹಾಯವಿಲ್ಲದೆ ನಿರ್ವಹಿಸುತ್ತಿದ್ದಾರೆ. ಪ್ರವಾಹದಿಂದ ಅವರ ಮನೆ ಕೊಚ್ಚಿ ಹೋಗಿದ್ದರೂ ತಾನು ತನ್ನ ಕುಟುಂಬವನ್ನು ನಿಭಾಯಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಆಹಾರ ಇಲ್ಲವೇ ಸೀಮೆ ಎಣ್ಣೆ ಯಾವುದೂ ಸರಕಾರದಿಂದ ಲಭಿಸಿಲ್ಲ. ಆದರೂ ಹೇಗೋ ಸುಧಾರಿಸಿಕೊಂಡು ಹೋಗುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
|