ದಲಿತ ಹುಡುಗನೊಬ್ಬ ಮೇಲ್ಜಾತಿ ಯವತಿಯನ್ನು ವರಿಸಿದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಪ್ರಜಾರಾಜ್ಯಂ ಪಕ್ಷದ ವರಿಷ್ಠ ಚಿರಂಜೀವಿ ಇದೀಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ತನ್ನ ಮಗಳು ಬೇರೆ ಜಾತಿ ಹುಡುಗನನ್ನು ಮದುವೆಯಾದ ವೇಳೆಗೆ ಆಕ್ಷೇಪವೆತ್ತಿದ್ದ ಚಿರಂಜೀವಿಗೆ ಇತರ ಅಂತರ್ಜಾತಿ ವಿವಾಹದಲ್ಲಿ ಪಾಲ್ಗೊಳ್ಳುವ ನೈತಿಕ ಹಕ್ಕಿಲ್ಲ ಎಂದು ಹೇಳಿರುವ ವಧುವಿನ ಕುಟುಂಬಿಕರು ಚಿರಂಜೀವಿ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತ ಹೋರಾಟಗಾರ, ಬರಹಗಾರ ಕೆ ಪದ್ಮಾ ರಾವ್ ಅವರ ಪುತ್ರ ಚೇತನ್ ಹಾಗೂ 24ರ ಹರೆಯದ ಇಂಜೀನಿಯರ್ ವಧು ನಳಿನಿ ಎಂಬವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಚಿರಂಜೀವಿ, ಅಂತರ್ಜಾತಿ ವಿವಾದ ಮಹತ್ವದ ಕುರಿತು ಚಿಕ್ಕ ಭಾಷಣವನ್ನು ಮಾಡಿದ್ದರು. ಅಲ್ಲದೆ, ಸಮಾಜದಲ್ಲಿ ಜಾತಿ ಪದ್ಧತಿಯನ್ನು ತೊಡೆದು ಹಾಕುವಲ್ಲಿ ಅಂತರ್ಜಾತಿ ವಿವಾಹಗಳು ಹೇಗೆ ಸಹಕಾರಿ ಎಂಬುದನ್ನು ವಿವರಿಸಿದ್ದರು.
ದಲಿತ ಬರಹಗಾರನ ಕುಟುಂಬವು ಚಿರಂಜೀವಿಯ ಸಕ್ರೀಯ ಬೆಂಬಲದೊಂದಿಗೆ ತಮ್ಮ ಮಗಳನ್ನು ಅಪಹರಿಸಿ ಬಂಧನದಲ್ಲಿರಿಸಿ, ಒತ್ತಾಯ ಪೂರ್ವಕವಾಗಿ ಮದುವೆ ಮಾಡಲಾಗಿದೆ ಎಂದು ನಳಿನಿಯ ಹೆತ್ತವರು ಆಪಾದಿಸಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವ ಪದ್ಮಾ ರಾವ್ ಅವರು ಇತ್ತೀಚೆಗೆ ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷ ಸೇರಿದ್ದಾರೆ. ತನ್ನ ಹೊಸ ಪಕ್ಷದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಚಿರಂಜೀವಿ ಈ ಕಾರ್ಯಕ್ಕಿಳಿದಿದ್ದಾರೆ ಎಂದು ನಳಿನಿಯ ತಂದೆ ಟಿ.ಸುಬ್ಬಾಬಾವ್ ಮತ್ತು ತಾಯಿ ಟಿ.ಮಣಿ ಅವರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದು, ತನ್ನ ಸ್ವಂತ ಪುತ್ರಿ ಶ್ರೀಜ ಅಂತರ್ಜಾತಿ ವಿವಾಹವಾದಾಗ ಚಿರಂಜೀವಿಯ ವರ್ತನೆಯನ್ನು ಎತ್ತಿ ಆಡಿದ್ದಾರೆ.
ಸ್ಥಳೀಯ ದೂರದರ್ಶನ ವಾಹಿನಿಯಲ್ಲಿ ಚಿರಂಜೀವಿ ಮತ್ತು ದಲಿತ ಸಾಹಿತಿಯ ವಿರುದ್ಧ ನಳಿನಿಯ ಹೆತ್ತವರು ದೂರಿದ್ದಾರೆ.
ಕಳೆದ ವರ್ಷ ಚಿರಂಜೀವಿ ಪುತ್ರಿ ಶ್ರೀಜ ತನ್ನ ಪ್ರಿಯಕರನೊಂದಿಗೆ ಮನೆ ಬಿಟ್ಟು ತೆರಳಿ ವಿವಾಹವಾಗಿರುವ ಪ್ರಕರಣವು ಅಪ್ಪ-ಮಗಳ ನಡುವಿನ ಭಿನ್ನಾಭಿಪ್ರಾಯವನ್ನು ಬೀದಿಗೆ ಬರುವಂತೆ ಮಾಡಿತ್ತಾದರೂ, ಇದೀಗ ಅವರೆಲ್ಲ ಒಂದಾಗಿದ್ದಾರೆ.
|