ಪ್ರಥಮ ಮಹಿಳಾ ಸ್ಪೀಕರ್ ಎಂಬ ಇತಿಹಾಸ ಬರೆದು ಅಧಿಕಾರ ವಹಿಸಿಕೊಂಡಿರುವ ಮೀರಾ ಕುಮಾರ್ ಅವರು ತಾನು ನಿಷ್ಪಕ್ಷಪಾತವಾಗಿ ಕಾರ್ಯ ಎಸಗುವುದಾಗಿ ಸಂಸತ್ತಿನಲ್ಲಿ ಭರವಸೆ ನೀಡಿದ್ದಾರೆ.
ಅವರ ಆಯ್ಕೆಯನ್ನು ಸಂಸತ್ತಿನಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಅವರನ್ನು ಪ್ರಧಾನಿ ಮನಮೋಹನ್ ಸಿಂಗ್, ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಹಾಗೂ ಲೋಕಸಭಾ ನಾಯಕ ಪ್ರಣಬ್ ಮುಖರ್ಜಿ ಅವರು ಸ್ಪೀಕರ್ ಸ್ಥಾನದತ್ತ ಕರೆದೊಯ್ದರು.
ಲೋಕಸಭೆಯ ಸಭಾಪತಿಯಾಗಿ ಆಯ್ಕೆಯಾದ ಬಳಿಕ ಪ್ರಥಮ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾನು ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸುವುದಾಗಿ ಮತ್ತು ಎಲ್ಲಾ ಸದಸ್ಯರುಗಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಮಾನ ಅವಕಾಶ ನೀಡುವುದಾಗಿ ನುಡಿದರು.
ಮಹಾನ್ ಪ್ರಜಾಪ್ರಭುತ್ವದ ಪ್ರಥಮ ಮಹಿಳಾ ಸ್ಪೀಕರ್ ಆಗಿ ತನ್ನನ್ನು ಆಯ್ಕೆ ಮಾಡಿರುವುದರಿಂದ ತನಗೆ ಅತೀವ ಸಂತಸವಾಗಿದೆ ಎಂದು ನುಡಿದ ಅವರು ತನ್ನ ಆಯ್ಕೆಗೆ ಕೃತಜ್ಞತೆ ಸಲ್ಲಿಸಿದರು.
ಸ್ಪೀಕರ್ ಆಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸುವಿರೇ ಎಂಬುದಾಗಿ ಪದೇಪದೇ ಪ್ರಶ್ನಿಸಿದಾಗ ನೇರ ಉತ್ತರ ನೀಡದೆ ನುಣುಚಿಕೊಂಡರು. ಸ್ಪೀಕರ್ ಎಲ್ಲವನ್ನೂ ಮೀರಿದವರು ಅವರು ನಿಷ್ಪಕ್ಷಪಾತಿ ಹಾಗೂ ತಟಸ್ಥವಾಗಿರಬೇಕು. ಇದನ್ನೇ ಸ್ಪೀಕರ್‌ರಿಂದ ನಿರೀಕ್ಷಿಸಲಾಗುತ್ತದೆ ಎಂದು ನುಡಿದರು.
1967ರಲ್ಲಿ ನೀಲಂ ಸಂಜೀವ ರೆಡ್ಡಿ ಅವರನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಿದ್ದಾಗ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಸ್ಪೀಕರ್ ಹುದ್ದೆಯ ಹಿನ್ನೆಲೆಯಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಕೈಕ ಸ್ಪೀಕರ್ ನೀಲಂ ಸಂಜೀವ ರೆಡ್ಡಿ ಆಗಿದ್ದಾರೆ. |