ಲೋಕಸಭೆಗೆ ಮಹಿಳಾ ಸ್ಪೀಕರ್ ಆಗಿ ಮೀರಾ ಕುಮಾರ್ ಬಂದು ದಾಖಲೆಯೇನೋ ನಿರ್ಮಿಸಿದ್ದಾರೆ. ಆದರೆ ಪುರುಷ ಪ್ರಧಾನ ಲೋಕಸಭೆಯಲ್ಲಿ ಮೀರಾ ಕುಮಾರ್ ಅವರನ್ನು 'ಸ್ಪೀಕರ್ ಸರ್' ಎಂದೇ ಬಾಯ್ತಪ್ಪಿಯೋ ಅಥವಾ ಅಭ್ಯಾಸ ಬಲದಿಂದಲೋ, ಸಂಬೋಧಿಸುವ ಪ್ರಕ್ರಿಯೆ ಮುಂದುವರಿದಿದೆ.
ಸಿಪಿಎಂ ಹಿರಿಯ ಮುಖಂಡ ವಾಸುದೇವ ಆಚಾರ್ಯ ಅವರಂತೂ ಹಲವಾರು ಬಾರಿ ಮೀರಾ ಕುಮಾರ್ ಅವರನ್ನು 'ಸ್ಪೀಕರ್ ಮೇಡಂ' ಎಂಬುದರ ಬದಲ್ 'ಸ್ಪೀಕರ್ ಸರ್' ಎಂದೇ ಸಂಬೋಧಿಸಿ ಪೇಚಿಗೀಡಾದರು.
ಆಡಳಿತ ಪಕ್ಷದವರಲ್ಲದೆ ವಿರೋಧ ಪಕ್ಷದವರೂ ಆಚಾರ್ಯರನ್ನು, 'ಸಭಾಧ್ಯಕ್ಷರ ಪೀಠದಲ್ಲಿರುವುದು ಮೇಡಂ ಸ್ಪೀಕರ್, ಆದುದರಿಂದ ತಿದ್ದಿಕೊಳ್ಳಿ' ಎಂದು ಈ ಕುರಿತು ಎಚ್ಚರಿಸಿದರು. ಆದರೂ ವಾಸುದೇವ ಆಚಾರ್ಯರ ನಾಲಿಗೆ ಕೇಳಬೇಕಲ್ಲ, ಎಂದಿನಂತೆಯೇ 'ಸರ್' ಎಂಬ ಸಂಬೋಧನೆಯೇ ಮುಂದುವರಿಯಿತು. ಕೊನೆಗೂ ಅವರು ಮೇಡಂ ಎಂದು ತಪ್ಪು ತಿದ್ದಿಕೊಳ್ಳುವಲ್ಲಿ ಯಶಸ್ವಿಯೂ ಆದರು.
ಸಮಾಜವಾದಿ ಪಕ್ಷದ ಸಂಸದ ಮುಲಾಯಂ ಸಿಂಗ್ ಯಾದವ್ ಕೂಡ 'ಸ್ಪೀಕರ್ ಮಹೋದಯಾ' ಬದಲು 'ಸ್ಪೀಕರ್ ಮಹೋದಯ್' ಎಂದೇ ಸಂಬೋಧಿಸಿದರು.
ದೇಶದ ಪ್ರಪ್ರಥಮ ಮಹಿಳಾ ಸ್ಪೀಕರ್ ಆಗಿ ಮೀರಾ ಕುಮಾರ್ ಅವರು ಬುಧವಾರ ಅಧಿಕಾರಕ್ಕೇರಿ ಚರಿತ್ರೆ ನಿರ್ಮಿಸಿದ್ದರು. |