ಭಾರತದ ರಾಜಕಾರಣಿಗಳು ಅತಿ ಭ್ರಷ್ಟರು ಮತ್ತು ಭ್ರಷ್ಟಾಚಾರ ತಡೆಗಟ್ಟುವಲ್ಲಿ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. ಬರ್ಲಿನ್ ಮೂಲದ ಅಂತಾರಾಷ್ಟ್ರೀಯ ಪಾರದರ್ಶಕ (ಟ್ರಾನ್ಸ್‌ಫರೆನ್ಸಿ ಇಂಟರ್ ನ್ಯಾಶನಲ್) ಈ ಸಮೀಕ್ಷೆ ನಡೆಸಿದೆ.
ಭಾರತೀಯ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಭ್ರಷ್ಟಾಚಾರದ ಮಡುವಿನಲ್ಲಿದೆ ಎಂಬುದಾಗಿ ಭಾರತೀಯರು ಪರಿಗಣಿಸಿದ್ದಾರೆ ಎಂದು ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಶನಲ್ ಇಂಡಿಯಾ ಸಂಘಟನೆಯ ಕಾರ್ಯಕಾರಿ ನಿರ್ದೇಶಕಿ ಅನುಪಮ ಝಾ ಅವರು ಬಿಡುಗಡೆ ಮಾಡಿರುವ 'ಜಾಗತಿಕ ಭ್ರಷ್ಟಾಚಾರ ಮಾಪಕ-2009' ಸಮೀಕ್ಷೆಯಲ್ಲಿ ಹೇಳಲಾಗಿದೆ.
ಈ ಸಮೀಕ್ಷೆಯಲ್ಲಿ ರಾಜಕಾರಣಿಗಳೇ ಹೆಚ್ಚು ಭ್ರಷ್ಟರು ಎಂದು ಶೇ.58 ಮಂದಿ ಹೇಳಿದ್ದರೆ, ಭ್ರಷ್ಟಾಚಾರ ತಡೆಗಟ್ಟುವಲ್ಲಿ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಶೇ.45 ಮಂದಿ ಅಭಿಪ್ರಾಯಿಸಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ. ಭ್ರಷ್ಟಾಚಾರದಲ್ಲಿ ದ್ವಿತೀಯ ಸ್ಥಾನ ಸರ್ಕಾರಿ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ.
ಪ್ರಸಕ್ತ ಲೋಕಸಭೆಯಲ್ಲಿ ಒಂಬತ್ತು ಸಚಿವರು ಮತ್ತು 150 ಸಂಸದರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಲಾಗಿರುವ ಅಫಿದಾವಿತ್‌ಗಳ ಆಧಾರದಲ್ಲಿ ಈ ಮಾಹಿತಿ ಪಡೆಯಲಾಗಿದೆ ಎಂಬುದಾಗಿ ಸಂಘಟನೆಯ ಉಪಾಧ್ಯಕ್ಷ ಎಸ್.ಕೆ. ಅಗರ್ವಾಲ್ ತಿಳಿಸಿದ್ದಾರೆ.
ಸಂಸತ್ತು, ಖಾಸಗೀ ವಲಯಗಳು, ಮಾಧ್ಯಮಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಅಭಿಪ್ರಾಯಿಸಿದ್ದಾರಾದರೂ, ಈ ರಂಗಗಳಲ್ಲಿನ ಭ್ರಷ್ಟಾಚಾರವು ರಾಜಕೀಯ ಮತ್ತು ಸರ್ಕಾರಿ ಅಧಿಕಾರಿಗಳಷ್ಟು ಹೊಲಸಾಗಿಲ್ಲ ಎಂದು ಹೇಳಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರವು ಬಡಜನತೆಯ ಜೀವನದ ಮೇಲೆ ಹೊಡೆತ ನೀಡಿದ್ದು, ಸರ್ಕಾರಗಳು ಒದಗಿಸಿರುವ ಸೌಲಭ್ಯಗಳನ್ನು ಪಡೆಯಲು ಇವರು ಲಂಚ ನೀಡಬೇಕಾಗಿದೆ ಎಂದು ಸಮೀಕ್ಷೆ ಹೇಳಿದೆ.
ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ ಹಾಗೂ ಬೆಂಗಳೂರು ನಗರಗಳನ್ನು ಸಮೀಕ್ಷೆಗಾಗಿ ಆಯ್ಕೆ ಮಾಡಲಾಗಿದೆ.
ಅದರಲ್ಲೂ, ಹೆಚ್ಚು ಆದಾಯಹೊಂದಿರುವವರಿಗಿಂತ ಕಡಿಮೆ ಆದಾಯ ಹೊಂದಿದದವರನ್ನೇ ಲಂಚಕ್ಕಾಗಿ ಒತ್ತಾಯಿಸಲಾಗುತ್ತದೆ ಮತ್ತು ಬಡಜನತೆಯು ತಮ್ಮ ಮೂಲಭೂತ ಅವಶ್ಯಕ ಸೇವೆಗಳನ್ನು ಪಡೆಯಲು ಒಟ್ಟಾರೆ ಸುಮಾರು 900 ಕೋಟಿ ರೂಪಾಯಿ ಲಂಚ ನೀಡುವಂತೆ ಬಲವಂತ ಪಡಿಸಲಾಗಿದೆ ಎಂದು ಭಾರತೀಯ ಭ್ರಷ್ಟಾಚಾರ ಅಧ್ಯಯನದ ಅಂಕೆಸಂಖ್ಯೆಗಳು ಹೇಳುತ್ತವೆ. |