ತನಗೆ ಜೈಲಿನಲ್ಲಿ ಬೋರಾಗುತ್ತಿದೆ ಎಂದು ವಿಶೇಷ ನ್ಯಾಯಾಲಯದ ಮುಂದೆ ಹೇಳಿರುವ ಪಾಕಿಸ್ತಾನದ ಪಾತಕಿ ಅಜ್ಮಲ್ ಅಮೀರ್ ಕಸಬ್ ತನಗೆ ಓದಲು ಪುಸ್ತಕಗಳನ್ನು ಒದಗಿಸುವಂತೆ ಕೋರಿದ್ದಾನೆ.
"ನನಗೆ ಜೈಲಿನಲ್ಲಿ ಬೋರಾಗುತ್ತಿದ್ದು ಓದಲು ಪುಸ್ತಕಗಳು ಬೇಕು" ಎಂಬುದಾಗಿ ಕಸಬ್ ವಿಶೇಷ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಅವರಿಗೆ ಮನವಿ ಮಾಡಿದ್ದಾನೆ.
ಮುಂಬೈಯಲ್ಲಿ ನಡೆಸಿದ ಭಯೋತ್ಪಾದನಾ ದಾಳಿಯ ವೇಳೆಗೆ ಜೀವಂತ ಸೆರೆಸಿಕ್ಕಿರುವ ಕಸಬ್, ಪ್ರಸಕ್ತ, ಅತಿ ಭದ್ರತೆಯ ಅರ್ಥರ್ ರಸ್ತೆ ಜೈಲಿನಲ್ಲಿ ಬಂಧಿಯಾಗಿದ್ದು, ಪ್ರಕರಣದ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ತನಗೆ ನ್ಯಾಯಾಲಯ ಪುಸ್ತಕ ಒದಗಿಸಬೇಕು ಅಥವಾ ತನ್ನ ಬಂಧನದ ವೇಳೆಗೆ ಪೊಲೀಸರು ವಶಪಡಿಸಿಕೊಂಡಿರುವ ಹಣದಲ್ಲಿ ಪುಸ್ತಕ ಖರೀದಿಸಲು ಅನುಮತಿ ನೀಡಬೇಕು ಎಂಬುದಾಗಿ ಕಸಬ್ ನ್ಯಾಯಾಲಯವನ್ನು ಕೋರಿದ್ದಾನೆ.
ಕಸಬ್ ತನಗೆ ತನ್ನ ವಕೀಲರೊಂದಿಗೆ ಮಾತನಾಡಬೇಕಿದೆ ಎಂಬುದಾಗಿ ಕೋರಿದ್ದು, ಅದಕ್ಕೆ ನ್ಯಾಯಾಲಯ ಅವಕಾಶ ನೀಡಿತ್ತು.
ಬಳಿಕ ಏನು ವಿಷಯ ಎಂಬುದಾಗಿ ನ್ಯಾಯಾಧೀಶರು ವಿಚಾರಿಸಿದಾಗ "ಕಸಬ್‌ಗೆ ಓದಲು ಪುಸ್ತಕ ಬೇಕು. ಆತನಿಗೆ ಜೈಲಿನಲ್ಲಿ ಬೋರಾಗುತ್ತಿದೆ" ಎಂಬುದಾಗಿ ಕಸಬ್‌ನ ವಕೀಲ ಅಬ್ಬಾಸ್ ಖಾಜ್ಮಿ ತಿಳಿಸಿದರು.
ಬಳಿಕ ಎದ್ದು ನಿಂತ ಕಸಬ್ "ಸರ್ ದಯವಿಟ್ಟು ನನಗೆ ಕೆಲವು ಪುಸ್ತಕಗಳನ್ನು ನೀಡಿ ಅಥನಾ ನನ್ನ ಹಣದಲ್ಲಿ ಪುಸ್ತಕ ಖರೀದಿಸಲು ಅವಕಾಶ ನೀಡಿ" ಎಂಬುದಾಗಿ ವಿನಂತಿಸಿದ. |