ಫ್ರಾನ್ಸಿನ ಮಾರ್ಸೆಲಿಸ್ ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ಸ್ಮಾರಕವನ್ನು ಸ್ಥಾಪಿಲು ಸರ್ಕಾರ ಯಾಕೆ ಒಪ್ಪಿಗೆ ನೀಡುತ್ತಿಲ್ಲ ಎಂಬುದಾಗಿ ಬುಧವಾರ ಬಿಜೆಪಿ ಲೋಕಸಭೆಯಲ್ಲಿ ಪ್ರಶ್ನಿಸಿತು.
ಮಾರ್ಸೆಲಿಸ್ ಮೇಯರ್ ಅವರು ಸಾವರ್ಕರ್ ಸ್ಮಾರಕವನ್ನು ಸ್ಥಾಪಿಸುವ ಇಚ್ಛೆಯನ್ನು ವ್ಯಕ್ತಪಡಿಸಿ ಬರೆದಿರುವ ಪತ್ರದ ವಾಸ್ತವ ಸ್ಥಿತಿ ಏನು ಮತ್ತು ಇಂತಹ ಕ್ರಮಕ್ಕೆ ಸರ್ಕಾರವು ಯಾವುದಾದರೂ ಆಕ್ಷೇಪವನ್ನು ಹೊಂದಿದೆಯೇ ಎಂಬವದಾಗಿ ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಅವರು ಲೋಕಸಭೆಯಲ್ಲಿ ತಿಳಿಯಬಯಸಿದರು.
ಶೂನ್ಯವೇಳೆಯಲ್ಲಿ ಈ ವಿಷಯವನ್ನು ಬಿಜೆಪಿ ಸದಸ್ಯ ಗೋಪಿನಾಥ ಮುಂಡೆ ಅವರು ಪ್ರಸ್ತಾಪಿದರು. ಬ್ರಿಟಿಷ್ ವಿರೋಧಿ ಕೃತ್ಯಗಳಿಗಾಗಿ ಸಾವರ್ಕರ್ ಅವರನ್ನು ಲಂಡನ್‌ನಲ್ಲಿ ಬಂಧಿಸಿ ಭಾರತಕ್ಕೆ ಕರೆತರುವ ವೇಳೆ ಮಾರ್ಸೆಲಿಸ್ ಪಕ್ಕದಲ್ಲಿ ನಿಲ್ಲಿಸಿದ್ದ ಬ್ರಿಟಿಷ್ ಹಡಗಿನಿಂದ ತಪ್ಪಿಸಿಕೊಂಡು ಬುಧವಾರಕ್ಕೆ 100 ವರ್ಷಗಳು ಸಲ್ಲುತ್ತದೆ ಎಂಬುದಾಗಿ ಗೋಪಿನಾಥ್ ಸದನದಲ್ಲಿ ತಿಳಿಸಿದರು.
ಸಾವರ್ಕರ್ ಅವರು ದಡದಾದ್ಯಂತ ಈಜಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅವರನ್ನು ಮತ್ತೆ ಮಾರ್ಸೆಲಿಸ್‌ನಲ್ಲಿ ಬಂಧಿಸಿ ಭಾರತಕ್ಕೆ ಕರೆ ತಂದು ಅಂಡಮಾನ್ ಜೈಲಿನಲ್ಲಿ ಇರಿಸಲಾಗಿತ್ತು. ಮಾರ್ಸೆಲಿಸ್ ಮೇಯರ್ ಅವರು ಸಾವರ್ಕರ್ ಪ್ರತಿಮೆಯನ್ನು ಸ್ಥಾಪಿಸಲು ಒಪ್ಪಿದ್ದು, ಸರ್ಕಾರದ ಒಪ್ಪಿಗೆಗಾಗಿ ಪತ್ರಬರೆದಿದ್ದರೂ, ಅದಕ್ಕೆ ಇನ್ನೂ ಉತ್ತರ ನೀಡಲಾಗಿಲ್ಲ ಎಂದು ಗೋಪಿನಾಥ್ ಹೇಳಿದರು.
ಸರ್ಕಾರವು ಈಕುರಿತು ಟಿಪ್ಪಣಿ ಮಾಡಿದ್ದು, ಈ ವಿಚಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರುವುದಾಗಿ ಸಂಸದೀಯ ವ್ಯವಹಾರ ಖಾತೆಯ ರಾಜ್ಯ ಸಚಿವ ವಿ. ನಾರಾಯಣ ಸ್ವಾಮಿ ಅವರು ಸದನಕ್ಕೆ ತಿಳಿಸಿದರು.
ಬ್ರಿಟಿಷ್ ಸರ್ಕಾರವನ್ನು ಅಲ್ಲಾಡಿಸಿದ ಈ ಘಟನೆ ನಡೆದು ನೂರು ವರ್ಷಗಳು ಸಲ್ಲುತ್ತಿರುವ ಕಾರಣ ಸರ್ಕಾರ ಈ ವಿಚಾರಕ್ಕೆ ತಕ್ಷಣ ಉತ್ತರಿಸಬೇಕು ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಇತರ ನಾಯಕರು ಒತ್ತಾಯಿಸಿದರು. |