ಮಾಜಿ ಸಚಿವ ಎಚ್. ವಿಶ್ವನಾಥ್‌ರವರ ಹಳ್ಳಿ ಹಕ್ಕಿಯ ಹಾಡು ಕೃತಿಯನ್ನು ನಿಷೇಧಿಸುವಂತೆ ಆಗ್ರಹಿಸಿ ನೂತನ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿದೆ. ಮಾಜಿ ಸಂಸದ ಡಿ. ಮಾದೇಗೌಡ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಈ ಹೋರಾಟ ಸಮಿತಿ ಪುಸ್ತಕ ನಿಷೇಧಗೊಳ್ಳುವವರೆಗೂ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಹೇಳಿದೆ. ಇದರಿಂದಾಗಿ ಹಳ್ಳಿ ಹಕ್ಕಿಯ ಹಾಡು ಕೃತಿಯ ಕುರಿತಾದ ಗೊಂದಲ ಮತ್ತಷ್ಟು ಜಟಿಲಗೊಂಡಿದೆ.
ಈ ಕೃತಿಯಿಂದಾಗಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಹಾಗೂ ನಟಿ ಸರೋಜದೇವಿಯವರ ವರ್ಚಸ್ಸಿಗೆ ಧಕ್ಕೆ ಬಂದಿದೆ ಎಂದು ಸಮಿತಿ ಆರೋಪಿಸಿದ್ದು, ಕೃತಿಯ ವಿರುದ್ಧವಾಗಿ ರಾಜ್ಯಪಾಲರ ಬಳಿಗೆ ನಿಯೋಗವೊಂದನ್ನು ಒಯ್ಯಲು ಅದು ನಿರ್ಧರಿಸಿದೆ.
ಈ ಮೂಲಕ ಮೈಸೂರಿನಲ್ಲಿ ವಿಶ್ವನಾಥ್ ವಿರೋಧಿ ಬಣವೊಂದು ಸ್ವತಃ ಕಾಂಗ್ರೆಸ್ ಪಕ್ಷದಲ್ಲಿಯೇ ರೂಪಗೊಂಡಿದ್ದು, ಕೃತಿಯ ವಿರುದ್ದ ಹಲವು ಕಾಂಗ್ರೆಸ್ ನಾಯಕರೇ ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯವನ್ನು ಬಹಿರಂಗಗೊಳಿಸಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಎಚ್. ವಿಶ್ವನಾಥ್‌ರವರ ಸ್ಥಿತಿ ಡೋಲಾಯಮಾನವಾಗಿದೆ.
|