ನನಗೆ ಯಾರ ಜೊತೆಗೂ ಮುನಿಸಿಲ್ಲ, ವೀರಪ್ಪ ಮೊಯಿಲಿ, ಆಸ್ಕರ್ ಫರ್ನಾಂಡಿಸ್ ಮುಂತಾದ ನಾಯಕರೂ ಸಹ ಪ್ರಚಾರಕ್ಕೆ ಹೋಗಿಲ್ಲ. ಆದರೂ ಚುನಾವಣೆ ನಡೆಯುತ್ತಿದೆ. ಅನಿವಾರ್ಯವಾದಲ್ಲಿ ನಾನೂ ಹೋಗಿ ಪ್ರಚಾರ ಮಾಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಪಕ್ಷ ಕಟ್ಟುವುದು, ಕಾಂಗ್ರೆಸ್ ಪಕ್ಷ ತೊರೆಯುವುದು ಇವೆಲ್ಲಾ ಕೇವಲ ವದಂತಿಗಳು ಮಾತ್ರ. ಅಂಥ ಯಾವ ನಿರ್ಧಾರವನ್ನೂ ನಾನು ತೆಗೆದುಕೊಂಡಿಲ್ಲ. ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿದ ನಂತರ ಮುಂದಿನ ರಾಜಕೀಯ ನಿರ್ಧಾರ ಏನು ಎಂಬುದನ್ನು ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದರು.
ರಾಜ್ಯ ಅಹಿಂದ ಮುಖಂಡರಾದ ಮುಕುಡಪ್ಪ ಹೊಸ ಪಕ್ಷ ಕಟ್ಟುವ ಕುರಿತು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅದರಲ್ಲಿ ನನ್ನ ಹೆಸರು ಬಳಸಿರುವುದು ಸರಿಯಲ್ಲ. ಈಗ ನಡೆಯುತ್ತಿರುವ ಉಪಚುನಾವಣೆಗಳ ಫಲಿತಾಂಶ ಮುಂದಿನ ರಾಜಕೀಯ ಬೆಳವಣಿಗೆಗಳ ದಿಕ್ಸೂಚಿಯಲ್ಲ ಎಂದರು. |