ಡೀಸೆಲ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಶೇ.3.56ರಷ್ಟು ಹೆಚ್ಚಿಸಿದೆ.
ಡೀಸೆಲ್ ದರ ಮತ್ತು ತುಟ್ಟಿಭತ್ಯೆ ಏರಿಕೆ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾಮಾನ್ಯ ಸಾರಿಗೆ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಡೀಸೆಲ್ ದರ ಪ್ರತಿ ಲೀಟರಿಗೆ 2.20 ರೂ. ಗಳಷ್ಟು ಹೆಚ್ಚಾಗಿರುವುದರಿಂದ ನಿಗಮಕ್ಕೆ ಪ್ರತಿವರ್ಷ 39.18 ಕೋಟಿ ರೂ. ಆರ್ಥಿಕ ಹೊರೆಯಾಗುತ್ತದೆ. ಇದಲ್ಲದೆ ಈ ತಿಂಗಳು ಸಿಬ್ಬಂದಿಗೆ ನೀಡುವ ತುಟ್ಟಿ ಭತ್ಯೆ ಶೇ.5.0ರಷ್ಟು ಹೆಚ್ಚಳದಿಂದ ನಿಗಮಕ್ಕೆ ಪ್ರತಿ ವರ್ಷ 11.99 ಕೋಟಿ ರೂ. ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಈ ನಿಟ್ಟಿನಲ್ಲಿ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದೆ.
ಈ ನಡುವೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಹ ಪ್ರಯಾಣ ದರವನ್ನು ಹೆಚ್ಚಿಸಿದೆ. ಬಹುತೇಕ ಹಂತಗಳಲ್ಲಿ ಪ್ರಯಾಣ ದರ 1 ರೂ. ಹೆಚ್ಚಾಗಿದ್ದು, ದೀರ್ಘ ಪ್ರಯಾಣದ ಕೆಲವು ಹಂತಗಳಲ್ಲಿ ಮಾತ್ರ 2 ರೂ. ಹೆಚ್ಚಾಗಿದೆ. ಆದರೆ ಸಾಮಾನ್ಯ ಸೇವೆಗಳ ಮೊದಲ ಮೂರು ಹಂತಗಳಲ್ಲಿ ದರಗಳಲ್ಲಿ ಯಾವುದೇ ಹೆಚ್ಚಳ ಇಲ್ಲ. ಮೂರನೇ ಹಂತದ ನಂತರ ಪುಷ್ಪಕ್ ಮತ್ತು ಸುವರ್ಣ ಸೇವೆಗಳೂ ಸೇರಿ 5 ಸಾವಿರಕ್ಕೂ ಹೆಚ್ಚು ಸೇವೆಗಳು ಸಾಮಾನ್ಯ ಜನರಿಗೆ ಲಭ್ಯವಾಗಿರುವಂತೆ ಪ್ರಯಾಣ ದರ ಏಕರೂಪವಾಗಿರುತ್ತದೆ ಎಂದು ಸಂಸ್ಥೆ ತಿಳಿಸಿದೆ. |