ಗುರುವಾರ ಆರಂಭಗೊಳ್ಳುತ್ತಿರುವ ವಿಧಾನಮಂಡಲದ ಬಜೆಟ್ ವಿಸ್ತರಿತ ಮೂರು ದಿನಗಳ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಲು ವಿರೋಧಪಕ್ಷಗಳು ಸಜ್ಜಾಗಿವೆ. ವಿದ್ಯುತ್ ಬಿಕ್ಕಟ್ಟು, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಲೋಪದೋಷಗಳು ಹಾಗೂ ಕಾನೂನು-ಸುವ್ಯವಸ್ಥೆ, ರೆಸಾರ್ಟ್‌ನಲ್ಲಿ ಅಧಿಕಾರಿಗಳ ಸಭೆ, ಅಧಿಕಾರಿಗಳ ಸಭೆ ಕರೆಯಲು ವಿರೋಧ ಪಕ್ಷಗಳಿಗೆ ಅನುಮತಿ ನಿರಾಕರಣೆ ಇತ್ಯಾದಿ ವಿಷಯದಲ್ಲಿ ವಿಶೇಷವಾಗಿ ಜೆಡಿಎಸ್ ಪಕ್ಷವು ಬಿಜೆಪಿ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಿದೆ.
ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದ ಬಜೆಟ್‌ಗೆ ಸದನದ ಸಮ್ಮತಿ ಪಡೆಯಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನಿಸಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಒರೆಗೆ ಹೆಚ್ಚುವ ಕೆಲಸಕ್ಕೆ ಪ್ರತಿಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಈ ನಿಟ್ಟಿನಲ್ಲಿ ಈ ಬಾರಿಯ ಅಧಿವೇಶನ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕಾವೇರಿದ ಚರ್ಚೆ ಆಗಲಿದೆ.
ಈ ನಡುವೆ ಲೋಕಸಭಾ ಚುನಾವಣೆ ನಂತರ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಬದಲಾವಣೆ ಆಗಿರುವುದು ಈ ಅಧಿವೇಶನದ ವಿಶೇಷತೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕ. ಅದೇ ರೀತಿ ಜೆಡಿಎಸ್ ಗುಂಪಿನಿಂದ ಎಚ್.ಡಿ. ರೇವಣ್ಣ ನಾಯಕರಾಗಿದ್ದಾರೆ.
ಪ್ರತಿಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಗೆ ಸ್ಪರ್ಧಿಸಿ ಕೇಂದ್ರ ಸಚಿವರಾಗಿದ್ದಾರೆ. ಅಲ್ಲದೆ, ಜೆಡಿಎಸ್‌ನಿಂದ ಎಚ್.ಡಿ. ಕುಮಾರಸ್ವಾಮಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದೇ ವೇಳೆ ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಹಾಗೂ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹಿನ್ನಡೆಯಾಗಿರುವ ಬಗ್ಗೆ ಸದನದಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ. |