ಭಾರತದ ಪಶ್ಚಿಮ ಭಾಗ ಮಾತ್ರವಲ್ಲ, ಬಾಂಗ್ಲಾಕ್ಕೆ ಹೊಂದಿಕೊಂಡಿರುವ ಪೂರ್ವಭಾಗದಲ್ಲಿಯೂ ಉಗ್ರವಾದ ಮೇಳೈಸಿರುವ ಮಣಿಪುರದ ಶಂಕಿತ ಪ್ರತ್ಯೇಕತಾವಾದಿ ಸಂಘಟನೆಯ ಉಗ್ರಗಾಮಿಯೊಬ್ಬ ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ್ದಾನೆ.
ರೋಶನ್ ಅಲಿ ಅಲಿಯಾಸ್ ಅನೀಸ್ ಹೆಸರಿನ ಈತ ನಿಷೇಧಿತ ಪೀಪಲ್ಸ್ ಯುನೈಟೆಡ್ ಲಿಬರೇಶನ್ ಫ್ರಂಟ್ - (ಪಿಯುಎಲ್ಎಫ್) ಆಜಾದ್ ಬಣದ ನಾಯಕನಾಗಿದ್ದು, ಮಣಿಪುರ ಪೊಲೀಸರು ಮತ್ತು ನಗರದ ಅಪರಾಧ ಪತ್ತೆ ದಳದ ಜಂಟಿ ಕಾರ್ಯಾಚರಣೆಯಲ್ಲಿ ಮಹಾದೇವಪುರದ ಸಿಂಗನಪಾಳ್ಯ ಎಂಬಲ್ಲಿ ಸೋಮವಾರ ರಾತ್ರಿ ಸೆರೆ ಸಿಕ್ಕಿದ್ದಾನೆ.
ಕೊಲೆ, ಕೊಲೆ ಯತ್ನ ಮುಂತಾದ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಅನೀಸ್, 16 ತಿಂಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು ಇಲ್ಲೇ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇದೀಗ ಆತನನ್ನು ಮಣಿಪುರ ಪೊಲೀಸರು ಕರೆದೊಯ್ದಿದ್ದಾರೆ.
ಇದರೊಂದಿಗೆ ಬೆಂಗಳೂರು ಉಗ್ರಗಾಮಿಗಳಿಗೆ ಸುರಕ್ಷಿತ ಸ್ಥಾನವಾಗುತ್ತಿದೆಯೇ ಎಂಬ ಸಂದೇಹವೂ ಜನತೆಯನ್ನು ಕಾಡತೊಡಗಿದೆ. |