ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮ ಕುರಿತ ತನ್ನ ನಿರ್ದೇಶನವನ್ನು ಜಾರಿಗೊಳಿಸದಿರುವ ಕರ್ನಾಟಕ ಸರಕಾರದ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಹೈಕೋರ್ಟ್, ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಿ ಲಿಖಿತ ಹೇಳಿಕೆ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ)ವು ರಾಜ್ಯ ಸರಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ದೂರಿನ ವಿಚಾರಣೆ ಸಂದರ್ಭ ಬುಧವಾರ ಈ ಕುರಿತು ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಮೂರ್ತಿ ಎನ್.ಕುಮಾರ್ ಮತ್ತು ವೇಣುಗೋಪಾಲ ಗೌಡ ಅವರನ್ನೊಳಗೊಂಡ ನ್ಯಾಯ ಪೀಠ, ಒಂದು ವಾರದೊಳಗೆ ಲಿಖಿತ ಹೇಳಿಕೆ ಸಲ್ಲಿಸುವಂತೆ ನಿರ್ದೇಶಿಸಿದೆ.
ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಜು.21ರಂದು ವಿಚಾರಣೆ ನಡೆಯಲಿರುವುದರಿಂದ, ಹೈಕೋರ್ಟ್ ನಿರ್ದೇಶನ ಅನುಷ್ಠಾನಗೊಳಿಸಲು ಕಾಲಾವಕಾಶ ಕೋರಿ ರಾಜ್ಯದ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅವಕಾಶ ಮಾಡಿಕೊಡದ ನ್ಯಾಯಾಲಯವು, ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು.
ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕನ್ನಡ ಕಡ್ಡಾಯಗೊಳಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆ ಕೋರಿ ಕುಸ್ಮಾ ಹೈಕೋರ್ಟ್ ಮೊರೆ ಹೋಗಿತ್ತು ಮತ್ತು ತಡೆಯಾಜ್ಞೆ ಪಡೆಯುವಲ್ಲಿ ಸಫಲವೂ ಆಗಿತ್ತು.
ಆದರೆ, ರಾಜ್ಯ ಸರಕಾರವು ಆದೇಶ ಅನುಷ್ಠಾನಗೊಳಿಸುವ ಬದಲು, ಈ ನಿರ್ಧಾರಕ್ಕೇ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. |